ಕುವೆಂಪು ಜನರ ಒಳಿತಿಗಾಗಿ ಸಾಹಿತ್ಯ ರಚಿಸಿದ ಜಗದ ಕವಿ: ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

Update: 2018-12-29 16:26 GMT

ಬೆಂಗಳೂರು, ಡಿ.29: ರಾಷ್ಟ್ರಕವಿ ಕುವೆಂಪು ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಹಿತ್ಯವನ್ನು ರಚಿಸುವ ತಪಸ್ಸು ಕೈಗೊಂಡವರು. ಹೀಗಾಗಿ ಅವರನ್ನು ಜಗದ ಕವಿ-ಯುಗದ ಕವಿಯೆಂದು ದ.ರಾ.ಬೇಂದ್ರೆ ಬಣ್ಣಿಸಿದ್ದರು ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದರು.

ಶನಿವಾರ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪುರವರ 115ನೆ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕುವೆಂಪುರವರು ಜಗತ್ತಿನ ಪ್ರತಿ ಮನುಷ್ಯನು ವಿಶ್ವ ಮಾನವನಾಗಲು ಸಾಧ್ಯವಿದೆ ಎಂಬುದನ್ನು ಬಲವಾಗಿ ನಂಬಿದ್ದರು. ಹೀಗಾಗಿಯೆ ಅವರ ಪ್ರತಿ ಕವನ, ಕತೆ, ಕಾದಂಬರಿ ಹಾಗೂ ನಾಟಕಗಳಲ್ಲಿ ಮಾನವೀಯತೆ, ಮನುಷ್ಯ ಪ್ರೀತಿಯನ್ನೊಳಗೊಂಡಿದೆ. ಜಾತಿ, ಧರ್ಮ, ವರ್ಗಗಳ ಮೌಢ್ಯಗಳಾಚೆಗಿನ ಬದುಕಿನ ಮೌಲ್ಯವೆ ಕುವೆಂಪು ಸಾಹಿತ್ಯದ ಒಟ್ಟು ಸಾರವೆಂದು ಅವರು ಹೇಳಿದರು.

ಸಾಹಿತ್ಯದಾಚೆಗೆ ಬದುಕುವ ರೀತಿ, ನೀತಿಗಳನ್ನು ರೂಪಿಸಿ, ಅದೇ ಮಾದರಿಯಲ್ಲಿ ಬದುಕಿದವರು ಕುವೆಂಪು. ಲಕ್ಷಾಂತರ ರೂ.ಖರ್ಚು ಮಾಡಿ ಅದ್ಧೂರಿಯಾಗಿ ಮದುವೆಯಾಗುವುದಕ್ಕಿಂತ ಸರಳವಾಗಿ ಮದುವೆಯಾಗುವ ವಿಧಾನವನ್ನು ಮಂತ್ರ ಮಾಂಗಲ್ಯದ ಮೂಲಕ ಹೇಳಿಕೊಟ್ಟಿದ್ದಾರೆ. ಸ್ವತಃ ತಮ್ಮ ಮಗ ಪೂರ್ಣಚಂದ್ರ ತೇಜಸ್ವಿಗೆ ಮಂತ್ರಮಾಂಗಲ್ಯ ರೀತಿಯಲ್ಲಿ ಮದುವೆ ಮಾಡಿಸುವ ಮೂಲಕ ಮಾದರಿಯಾದರು ಎಂದು ಅವರು ಸ್ಮರಿಸಿದರು.

ನಾಡಿನಲ್ಲಿ ಹಲವು ಸಾಹಿತಿಗಳು ಕನ್ನಡ ಭಾಷೆ, ಇಲ್ಲಿನ ಪರಿಸರ ಹಾಗೂ ಸಂಸ್ಕೃತಿಯ ಕುರಿತು ಸಾಕಷ್ಟು ಬರೆದಿರಬಹುದು. ಆದರೆ, ಕುವೆಂಪು ರೀತಿಯಲ್ಲಿ ಕನ್ನಡವನ್ನು ಕಾಯಕದ ರೀತಿಯಲ್ಲಿ ತೊಡಗಿಸಿಕೊಂಡವರು ಮತ್ತೊಬ್ಬ ಕವಿಯನ್ನು ಕಾಣಲಾಗುವುದಿಲ್ಲ. ಅವರ ಪ್ರತಿ ಸಾಹಿತ್ಯದ ಬರವಣಿಗೆಯಲ್ಲಿಯು ಕನ್ನಡತನ ಎಂಬುದು ಹಾಸುಹೊಕ್ಕಾಗಿದೆ ಎಂದು ಅವರು ಬಣ್ಣಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ಕುವೆಂಪುರವರು ತಮ್ಮ ಸಾಹಿತ್ಯದ ಮೂಲಕ ಜಗತ್ತಿಗೆ ನೀಡಿರುವ ತತ್ವಗಳು ಸಾರ್ವಕಾಲಿಕವಾದದ್ದು. ಶೋಷಿತರ ಆತ್ಮಾಭಿಮಾನವನ್ನು ಬಡಿದೆಬ್ಬಿಸುವುದು ಹಾಗೂ ಉಳ್ಳವರಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರಣೆಯಾಗುವಂತಹ ಸಾಹಿತ್ಯ ರಚಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ತಿಮ್ಮಯ್ಯ, ಕನ್ನಡಪರ ಹೋರಾಟಗಾರ ರಾ.ನಂ.ಚಂದ್ರಶೇಖರ ಮತ್ತಿರರಿದ್ದರು.

ರಾಜ್ಯ ಸರಕಾರ ಮುಂದಿನ ಶೈಕ್ಷಣಿಕ ಸಾಲಿನಿಂದ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯುವ ಚಿಂತನೆ ಕೈ ಬಿಡಬೇಕು. ಆದರೆ, ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸುವುದಕ್ಕೆ ಯಾವುದೆ ಅಭ್ಯಂತರವಿಲ್ಲ. ಒಂದು ವೇಳೆ ಜನಾಭಿಪ್ರಾಯದ ವಿರುದ್ಧವಾಗಿ ಸರಕಾರ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ತೆರೆಯಲು ಮುಂದಾದರೆ, ಗೋಕಾಕ್ ರೀತಿಯ ಹೋರಾಟ ನಡೆಸಬೇಕಾದೀತು.

-ಮನು ಬಳಿಗಾರ್, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News