ಬಿಜೆಪಿ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ವಿಪಕ್ಷ ನಾಯಕ: ಯಡಿಯೂರಪ್ಪ
ಬೆಂಗಳೂರು, ಡಿ. 31: ‘ಆಪರೇಷನ್ ಕಮಲದ ಮೂಲಕ ಶಾಸಕರ ಕುದುರೆ ವ್ಯಾಪಾರ ಮಾಡುತ್ತಿದೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದು, ಇದು ಅವರಿಗೆ ಶೋಭೆ ತರುವುದಿಲ್ಲ. ಮೈತ್ರಿ ಸರಕಾರ ಬಿದ್ದರೆ ನಾವು ಸರಕಾರ ರಚನೆ ಮಾಡುತ್ತೇವೆ. ಬಿಜೆಪಿ ಸರಕಾರ ರಚನೆಯಾದರೆ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಲಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭವಿಷ್ಯ ನುಡಿದರು.
ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವಾಗಿಯೇ ಮೈತ್ರಿ ಸರಕಾರ ಅಸ್ತಿರಗೊಳಿಸುತ್ತಿಲ್ಲ. ಒಂದೊಮ್ಮೆ ಸರಕಾರ ತಾನಾಗಿಯೇ ಬಿದ್ದು ಹೋದರೆ ಸುಮ್ಮನೆ ಕೂರಲು ನಾವೇನು ಸನ್ಯಾಸಿಗಳಲ್ಲ. ಹೊಸ ವರ್ಷದಲ್ಲಿ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಅಷ್ಟರ ಮಟ್ಟಿಗೆ ಕಾಂಗ್ರೆಸ್-ಜೆಡಿಎಸ್‌ನಲ್ಲಿ ಅತೃಪ್ತಿ, ಅಸಮಾಧಾನ ಹೆಚ್ಚಾಗಿದೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು ಎಂದು ವಿಶ್ಲೇಷಿಸಿದರು.
ರಾಜ್ಯದ 156 ತಾಲೂಕುಗಳಲ್ಲಿ ಭೀಕರ ಸ್ವರೂಪದ ಬರ ಪರಿಸ್ಥಿತಿ ಆವರಿಸಿದ್ದು, ಹಲವು ಮಂದಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಬೇಜವಾಬ್ದಾರಿಯಿಂದ ಹೊಸ ವರ್ಷದ ಸಂಭ್ರಮಕ್ಕೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆಂದು ವಿಪಕ್ಷ ನಾಯಕ ಯಡಿಯೂರಪ್ಪ ಟೀಕಿಸಿದರು.
ರಾಜ್ಯದ ಜನತೆ ಬರ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಸಿಎಂ ವಿದೇಶಕ್ಕೆ ತೆರಳಿದ್ದು ಎಷ್ಟು ಸರಿ. ಸಂಪುಟ ಸಹೋದ್ಯೋಗಿಗಳು ನೂತನ ವರ್ಷ ಸಂಭ್ರಮಾಚರಣೆಗೆ ಬೇರೆ-ಬೇರೆ ಕಡೆಗೆ ತೆರಳಿದ್ದಾರೆ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ದೂರಿದರು.
ಮೈತ್ರಿ ಸರಕಾರದ ನಾಯಕರು ಪರಸ್ಪರ ಕಚ್ಚಾಡುತ್ತಿದ್ದು, ನನ್ನ ಸೋಲಿಗೆ ಕಾರಣರಾಗಿ ಸಿಎಂ ಸ್ಥಾನ ತಪ್ಪಿಸಿದ್ದಾರೆಂದು ಪದೇ ಪದೇ ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದು, ಉಭಯ ಪಕ್ಷಗಳ ಮುಖಂಡರ ನಡುವಿನ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಟೀಕಿಸಿದರು.
‘ಕಾಂಗ್ರೆಸ್‌ನ ಅತೃಪ್ತ ಶಾಸಕರು ಬಿಜೆಪಿ ನಾಯಕರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ್ದಾರೆ ಎಂಬುದು ಕೇವಲ ಊಹಾಪೋಹ. ಅತೃಪ್ತ ಶಾಸಕರಾಗಲಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಾಗಲಿ ಯಾರೂ ದಿಲ್ಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿಲ್ಲ’
-ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ