ವಿಚಾರಣೆಯನ್ನೇ ಎದುರಿಸದೆ ಕ್ಲೀನ್ ಚಿಟ್ ಪಡೆದ ಅಮಿತ್ ಶಾ

Update: 2019-01-01 18:41 GMT

ಸೊಹ್ರಾಬುದ್ದೀನ್ ಶೇಖ್, ಆತನ ಪತ್ನಿ ಕೌಸರ್ ಬೀ ಹಾಗೂ ಸಹಚರ ತುಳಸೀರಾಮ್ ಪ್ರಜಾಪತಿಯವರನ್ನು 2005 ಮತ್ತು 2006ರಲ್ಲಿ ಸರಣಿ ನಕಲಿ ಎನ್‌ಕೌಂಟರ್‌ಗಳಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ 22 ಆರೋಪಿಗಳನ್ನು ದೋಷಮುಕ್ತಗೊಳಿಸಿ ಒಂದು ವಾರ ಕಳೆದರೂ, ಸಿಬಿಐ ವಿಶೇಷ ನ್ಯಾಯಾಧೀಶರು ತಮ್ಮ ಲಿಖಿತ ತೀರ್ಪನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ವಿಶೇಷ ಎಂಬಂತೆ ತಮ್ಮ ತೀರ್ಮಾನದ ಕೊನೆಯಲ್ಲಿ ಒಂದು ಪ್ಯಾರಾವನ್ನು ತಮ್ಮ ನ್ಯಾಯಾಲಯದ ಎದುರು ವಿಚಾರಣೆ ಎದುರಿಸದ ಒಬ್ಬ ವ್ಯಕ್ತಿಯನ್ನು ಅಂದರೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ದೋಷಮುಕ್ತಗೊಳಿಸಲು ಮೀಸಲಿಟ್ಟಿದ್ದಾರೆ.

ವಿಶೇಷ ನ್ಯಾಯಾಧೀಶ ಜೆ.ಎಸ್.ಶರ್ಮಾ ಅವರು, ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಚಾರಣೆ ನಡೆಸಿದ ಸಿಬಿಐ ಮೇಲೆ ಗಂಭೀರ ಆರೋಪ ಮಾಡಿದ್ದು, ‘‘ಮೂವರ ಹತ್ಯೆ ವಿಚಾರದಲ್ಲಿ ಪೂರ್ವಯೋಜಿತ ಸಿದ್ಧಾಂತ ಮತ್ತು ಹೇಗಾದರೂ ಮಾಡಿ ರಾಜಕೀಯ ನಾಯಕರನ್ನು ಸಿಲುಕಿಸುವ ದೃಷ್ಟಿಯಿಂದ ಹೆಣೆದ ಕಥೆ’’ ಎಂಬ ಪದಗಳನ್ನು ಬಳಸಿದ್ದಾರೆ. ತಮ್ಮ ನ್ಯಾಯಾಲಯದಲ್ಲಿ ವಿಚಾರಣೆಯನ್ನೇ ಎದುರಿಸದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಸ್ಪಷ್ಟವಾಗಿ ಕ್ಲೀನ್ ಚಿಟ್ ನೀಡುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

‘‘ನನ್ನ ಹಿಂದಿನ ನ್ಯಾಯಾಧೀಶರು ಆರೋಪಿ ಸಂಖ್ಯೆ 16 (ಅಮಿತ್ ಶಾ) ಅವರ ಅರ್ಜಿಯನ್ನು ವಿಲೇವಾರಿ ಮಾಡುವ ವೇಳೆ ಹೊರಡಿಸಿದ ಆದೇಶದಲ್ಲಿ, ತನಿಖೆಯು ರಾಜಕೀಯ ಪ್ರೇರಿತ ಎಂದು ಸ್ಪಷ್ಟವಾಗಿ ದಾಖಲಿಸಿದ್ದಾರೆ. ನನ್ನ ಎದುರು ಪ್ರಸ್ತುತಪಡಿಸಿದ ಸಂಪೂರ್ಣ ವಿಷಯಗಳನ್ನು ನಿಷ್ಪಕ್ಷಪಾತವಾಗಿ ಪರಿಗಣಿಸಿ ಮತ್ತು ಪ್ರತಿಯೊಂದು ಸಾಕ್ಷಿ ಮತ್ತು ಪುರಾವೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಸಿಬಿಐನಂಥ ಅತ್ಯುನ್ನತ ತನಿಖಾ ಸಂಸ್ಥೆ ಪೂರ್ವಯೋಜಿತ ಸಿದ್ಧ್ದಾಂತವನ್ನು ಮತ್ತು ಹೇಗಾದರೂ ಮಾಡಿ ರಾಜಕೀಯ ಮುಖಂಡರನ್ನು ಸಿಲುಕಿಸಲು ಕಟ್ಟುಕಥೆ ಹೆಣೆದಿದೆ ಎಂದು ಹೇಳಲು ಯಾವ ಹಿಂಜರಿಕೆಯೂ ಇಲ್ಲ. ಆ ಬಳಿಕ ಏಜೆನ್ಸಿ, ಕಾನೂನಿಗೆ ಅನುಗುಣವಾಗಿ ತನಿಖೆ ನಡೆಸುವ ಬದಲು ಕೇವಲ ತನ್ನ ಗುರಿಯನ್ನು ತಲುಪಲು ಏನು ಬೇಕೋ ಅದನ್ನು ಮಾಡಿದೆ’’ ಎಂದಿದ್ದಾರೆ ಶರ್ಮಾ.

ಮೊದಲು ಪ್ರಕರಣದಲ್ಲಿ ಶಾ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿತ್ತು. ಆದರೆ 2014ರಲ್ಲಿ ನ್ಯಾಯಾಧೀಶ ಎಂ.ಬಿ.ಗೋಸಾವಿಯವರು ವಿಚಾರಣೆ ಆರಂಭವಾಗುವ ಮುನ್ನವೇ ಅವರನ್ನು ದೋಷಮುಕ್ತಗೊಳಿಸಿದ್ದರು. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಬಿ.ಎಚ್.ಲೋಯಾ ಅವರು ಹಠಾತ್ತನೆ ಮೃತಪಟ್ಟ ಹಿನ್ನೆಲೆಯಲ್ಲಿ ಅದೇ ತಿಂಗಳು ಗೋಸಾವಿ ಆ ಹುದ್ದೆಗೆ ನಿಯೋಜಿತರಾಗಿದ್ದರು.

ಶಾ ದೋಷಮುಕ್ತಿಯ ಬಳಿಕ ಕ್ರಮೇಣ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೂಡಾ ದೋಷಮುಕ್ತಗೊಳಿಸಲಾಯಿತು. ವಾಸ್ತವವಾಗಿ ವಿಚಾರಣೆ ಆರಂಭವಾಗುವ ವೇಳೆಗೆ ಕೇವಲ 22 ಮಂದಿ ಮೂಲ ಆರೋಪಿಗಳು ಉಳಿದುಕೊಂಡರು. ಇವರಲ್ಲಿ ಬಹುತೇಕ ಮಂದಿ ಕೆಳಹಂತದ ಪೊಲೀಸರು. ಡಿಸೆಂಬರ್ 21ರಂದು ನ್ಯಾಯಾಧೀಶ ಶರ್ಮಾ, ಹತ್ಯೆ, ಸಂಚು ಮತ್ತು ಪುರಾವೆ ನಾಶದ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದರು.

‘‘ಸಿಬಿಐ ಕಾನೂನಿಗೆ ಅನುಗುಣವಾಗಿ ತನಿಖೆ ನಡೆಸುವ ಬದಲು ಕೇವಲ ತನ್ನ ಗುರಿಯನ್ನು ತಲುಪಲು ಏನು ಬೇಕೋ ಅದನ್ನು ಮಾಡಿದೆ’’ ಎಂದು ಅವರು ಹೇಳಿದ್ದರು.

 ಶಾ ಅವರನ್ನು ಸಿಲುಕಿಸಲು ಸಿಬಿಐ ಪ್ರಯತ್ನಿಸಿದೆ ಎಂದು ಶರ್ಮಾ ತಮ್ಮ ತೀರ್ಪಿನಲ್ಲಿ ಆರೋಪಿಸಿದ್ದರೂ, ಶಾ ಹಾಗೂ ದೋಷಮುಕ್ತಗೊಂಡ ಇತರ 15 ಮಂದಿ ಈಗಾಗಲೇ ದೋಷಮುಕ್ತಗೊಂಡಿರುವುದರಿಂದ ಅವರು ವಿಚಾರಣೆ ಎದುರಿಸುತ್ತಿಲ್ಲ ಎಂಬ ಕಾರಣ ನೀಡಿ, ಸಾಕ್ಷಿಗಳು ಮತ್ತು ಅಭಿಯೋಜಕರು ಅವರ ವಿರುದ್ಧದ ನಿರ್ದಿಷ್ಟ ಪುರಾವೆಗಳನ್ನು ನ್ಯಾಯಾಲಯದ ಮುಂದೆ ದಾಖಲೆಯಲ್ಲಿ ಸೂಚಿಸಿದರು.

ತಮ್ಮ ತೀರ್ಪಿನಲ್ಲಿ ಶರ್ಮಾ ಸ್ಪಷ್ಟವಾಗಿ ಹೇಳಿದಂತೆ, ‘‘ನನ್ನ ಎದುರು ಪ್ರಸ್ತುತಪಡಿಸಿದ ಸಂಪೂರ್ಣ ವಿಷಯಗಳನ್ನು ಪರಿಗಣಿಸಿದ್ದೇನೆ. ಹೀಗೆ ಸಮಗ್ರ ತನಿಖೆಯನ್ನು ಪರಿಶೀಲಿಸಿದ ಬಳಿಕ ಹಾಗೂ ವಿಚಾರಣೆ ನಡೆಸಿದ ಬಳಿಕ, ಈ ಅಪರಾಧಗಳ ತನಿಖೆಯ ವೇಳೆ ಸಿಬಿಐ, ಈ ಅಪರಾಧಗಳ ಸತ್ಯವನ್ನು ಬಯಲು ಮಾಡುವ ಬದಲು ಬೇರೇನನ್ನೋ ಮಾಡಿದೆ ಎಂದು ದಾಖಲಿಸಲು ಯಾವ ಹಿಂಜರಿಕೆಯೂ ಇಲ್ಲ. ಸಿಬಿಐ ಸತ್ಯವನ್ನು ಹುಡುಕುವ ಬದಲು ಪೂರ್ವಯೋಜಿತ ಸಿದ್ಧಾಂತವನ್ನು ನಿರೂಪಿಸುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದೆ. ಆದರೆ ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳ ಲೋಪದ ವಿರುದ್ಧ ಯಾವುದೇ ನಿರ್ದಿಷ್ಟ ನಿರ್ದೇಶನವನ್ನಾಗಲೀ, ಆಕ್ಷೇಪಣೆಗಳನ್ನಾಗಲೀ ನ್ಯಾಯಾಲಯ ಮಾಡಿಲ್ಲ.’’

ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಸಿಬಿಐ ವಕ್ತಾರರು, ನ್ಯಾಯಾಲಯದ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ‘‘ನಾವು ಇದುವರೆಗೆ ತೀರ್ಪಿನ ಪ್ರತಿ ಸ್ವೀಕರಿಸಿಲ್ಲ. ಪ್ರಸ್ತುತ ಯಾವುದೇ ಅಭಿಪ್ರಾಯವನ್ನು ನೀಡುವ ಸ್ಥಿತಿಯಲ್ಲಿ ನಾವಿಲ್ಲ’’ ಎಂಬ ಕಾರಣ ನೀಡಿದ್ದಾರೆ.

ಮೂರು ಎನ್‌ಕೌಂಟರ್‌ಗಳ ಬಗ್ಗೆ ಸ್ಪಷ್ಟತೆ ಇಲ್ಲ
ಸೊಹ್ರಾಬುದ್ದೀನ್‌ರನ್ನು ಗುಜರಾತ್ ಪೊಲೀಸರು 2005ರ ನವೆಂಬರ್ 26ರಂದು ಹತ್ಯೆ ಮಾಡಿದ್ದರು. ರಾಜ್ಯದ ಉನ್ನತ ರಾಜಕೀಯ ನಾಯಕರನ್ನು ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಲಷ್ಕರೆ ತಯ್ಯಿಬ ಈತನನ್ನು ಕಳುಹಿಸಿದೆ ಎಂದು ಪೊಲೀಸರು ಹೇಳಿಕೊಂಡಿದ್ದರು.

2007ರಲ್ಲಿ 13 ಮಂದಿ ಪೊಲೀಸರ ವಿರುದ್ಧ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಗುಜರಾತ್ ಸರಕಾರ ಸ್ವತಃ ಇದು ನಕಲಿ ಎನ್‌ಕೌಂಟರ್ ಎಂದು ಒಪ್ಪಿಕೊಂಡಿತ್ತು. ಆ ಬಳಿಕ ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಿತು. ಇದು 2012ರಲ್ಲಿ ಆರೋಪಪಟ್ಟಿ ಸಲ್ಲಿಸಿತು. ಸೊಹ್ರಾಬುದ್ದೀನ್ ಪತ್ನಿ ಕೌಸರ್ ಬಿ ಅವರನ್ನು ಪತಿಯ ಜತೆ ಹೈದರಾಬಾದ್-ಸಾಂಗ್ಲಿ ಬಸ್ಸಿನಲ್ಲಿ ಪ್ರಯಾಣಿಸು ತ್ತಿದ್ದಾಗ ಅಪಹರಿಸಿ, ಕಾನೂನುಬಾಹಿರವಾಗಿ ಕಸ್ಟಡಿಯಲ್ಲಿ ಇಡಲಾಗಿತ್ತು. ಬಳಿಕ 2005ರ ನವೆಂಬರ್ 28ರಂದು ಹತ್ಯೆ ಮಾಡಲಾಯಿತು. ಈ ಹತ್ಯೆಯ ಬಗ್ಗೆ ತಿಳಿದಿದ್ದ ಪ್ರಜಾಪತಿಯನ್ನು 2006ರ ಡಿಸೆಂಬರ್ 28ರಂದು ಕಸ್ಟಡಿಯಲ್ಲಿ ಹತ್ಯೆ ಮಾಡಲಾಯಿತು ಹಾಗೂ ಬಳಿಕ ಇದನ್ನು ತಪ್ಪಿಸಿಕೊಳ್ಳುವ ವಿಫಲ ಯತ್ನ ಎಂದು ಬಿಂಬಿಸಲಾಗಿದೆ ಎಂದು ಸಿಬಿಐ ಆರೋಪಪಟ್ಟಿ ವಿವರಿಸಿತ್ತು.

ದೊಡ್ಡ ಅಂತರ್‌ರಾಜ್ಯ ರಾಜಕೀಯ- ಪೊಲೀಸ್- ಅಪರಾಧಿಗಳ ದುಷ್ಟಕೂಟದ ಭಾಗವಾಗಿ ಮೂವರನ್ನು ಹತ್ಯೆ ಮಾಡಲಾಗಿದೆ ಎಂದು ಸಿಬಿಐ ಹೇಳಿತ್ತು. ಆದರೆ ಸಿಬಿಐ ವಿಶೇಷ ನ್ಯಾಯಾಲಯ, ಪ್ರಜಾಪತಿಯನ್ನು ನೈಜ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂಬ ನಿರ್ಧಾರಕ್ಕೆ ಬಂದಿದೆ.
ಪ್ರಜಾಪತಿ ಸಿಬಿಐ ವಾದಿಸಿದಂತೆ, ಶೇಖ್ ಜತೆ ತೆಲಂಗಾಣದ ಹೈದರಾಬಾದ್‌ನಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಗೆ ಬಸ್ಸಿನಲ್ಲಿ ಪ್ರಯಾಣಿಸಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.

‘‘ಶೇಖ್ ಜತೆಗೆ ಪ್ರಜಾಪತಿ ಕೂಡಾ ಪ್ರಯಾಣಿಸಿದ್ದರೆ, ಆರೋಪಿಗಳು ಆತನನ್ನು ಮುಗಿಸಲು ಒಂದು ವರ್ಷದವರೆಗೆ ಕಾಯುತ್ತಿರಲಿಲ್ಲ. ಬದಲಾಗಿ ಶೇಖ್ ಜತೆಗೇ ಆತನನ್ನೂ ಹತ್ಯೆ ಮಾಡುತ್ತಿದ್ದರು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

‘ದಿ ವೈರ್’ಗೆ ನೀಡಿದ ಸಂದರ್ಶನದಲ್ಲಿ ಪ್ರಜಾಪತಿಯ ತಾಯಿ ನರ್ಮದಾಬಾಯಿ, ತನ್ನನ್ನು ಮುಗಿಸಲು ಪೊಲೀಸರು ಹೇಗೆ ಮೂರು ಸಂದರ್ಭಗಳಲ್ಲಿ ಪ್ರಯತ್ನಿಸಿದ್ದಾರೆ ಎನ್ನುವುದನ್ನು ಮಗ ಹೇಳಿಕೊಂಡಿದ್ದ ಎಂದು ಬಹಿರಂಗಪಡಿಸಿದ್ದರು.

ಪ್ರಜಾಪತಿ ಹತ್ಯೆ ಪ್ರಕರಣದಲ್ಲಿ ಸಿಬಿಐ ಆರೋಪವನ್ನು ನ್ಯಾಯಾಲಯದಲ್ಲಿ ನಿರಾಕರಿಸಿದ ಪೊಲೀಸರು, ಉದಯಪುರ ಕೇಂದ್ರೀಯ ಕಾರಾಗೃಹದಿಂದ ಅಹ್ಮದಾಬಾದ್‌ಗೆ ಆರೋಪಿಯನ್ನು ಕರೆದೊಯ್ಯಲು ಬೆಂಗಾವಲು ನೀಡುತ್ತಿದ್ದ ವೇಳೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದಾಗ ಆತ ಮೃತಪಟ್ಟ ಎಂದು ಹೇಳಿದ್ದರು. ಆಗ ಹಾರಿಸಿದ ಗುಂಡಿನಿಂದ ಒಬ್ಬ ಪೊಲೀಸ್ ಪೇದೆಗೂ ಗಾಯಗಳಾಗಿವೆ ಎಂದು ಸಮರ್ಥಿಸಿಕೊಂಡಿದ್ದರು. ಆದರೆ ಸಿಬಿಐ ಇದನ್ನು ಸ್ವಯಂ ಮಾಡಿಕೊಂಡ ಗಾಯ ಎಂದು ಹೇಳಿತ್ತು. ಸಿಬಿಐನ ವಾದವನ್ನು ಪ್ರಶ್ನಿಸುವ ಸಲುವಾಗಿ ಆರೋಪಿ ಪೊಲೀಸ್ ತಾನಾಗಿಯೇ ಗಾಯ ಮಾಡಿಕೊಂಡಿದ್ದಾನೆ ಎನ್ನುವುದು ಸಿಬಿಐ ವಾದವಾಗಿತ್ತು.

‘ಶೇಖ್ ಹತ್ಯೆ ಮಾಡಿದ ಸನ್ನಿವೇಶವನ್ನು ನಿರೂಪಿಸುವ ಸಲುವಾಗಿ ಸೂಕ್ತ ಪುರಾವೆಗಳನ್ನು ಒದಗಿಸಲು ಸಿಬಿಐ ವಿಫಲವಾಗಿದೆ ಎಂದೂ ನ್ಯಾಯಾಲಯ ಹೇಳಿದೆ. 13 ವರ್ಷದ ಬಳಿಕವೂ ಆತನ ಸಾವು, ಆತನ ಪತ್ನಿ ಕೌಸರ್‌ಬಿ ಕಣ್ಮರೆಯಾದಂತೆ ನಿಗೂಢವಾಗಿಯೇ ಉಳಿದಿದೆ ಎಂದು ಮತ್ತೊಂದು ರೀತಿಯಲ್ಲಿ ಹೇಳಬಹುದು.

ನ್ಯಾಯಾಲಯದ ಅಭಿಪ್ರಾಯದ ಪ್ರಕಾರ, ಕೌಸರ್‌ಬಿ ಕೂಡಾ ಶೇಖ್ ಜತೆಗೆ ಹೈದರಾಬಾದ್‌ನಿಂದ ಸಾಂಗ್ಲಿಗೆ ಪ್ರಯಾಣಿಸಿದ್ದಳು ಎಂದು ನಿರೂಪಿಸುವ ಅಥವಾ ಬಳಿಕ ಅವರನ್ನು ಅಪಹರಿಸಿ ಶೇಖ್ ಜತೆಗೆ ಅತಿಥಿಗೃಹದಲ್ಲಿ ಇರಿಸಲಾಗಿತ್ತು. ಆಕೆಯನ್ನು ಹತ್ಯೆ ಮಾಡಿ ದೇಹವನ್ನು ಸುಟ್ಟುಹಾಕುವ ಮೊದಲು ಮತ್ತೊಂದು ವಿಶ್ರಾಂತಿಗೃಹಕ್ಕೆ ಸ್ಥಳಾಂತರಿಸಲಾಯಿತು ಎನ್ನುವುದಕ್ಕೆ ಯಾವುದೇ ಪುರಾವೆಯನ್ನು ಸಿಬಿಐ ಒದಗಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಲೆ ಹಾಕಿದ ಪುರಾವೆಗಳ ಆಧಾರದಲ್ಲಿ ಆಕೆಯ ಚಲನ ವಲನ ಮತ್ತು ಆಕೆಯ ಸಂಭಾವ್ಯ ಅಪಹರಣ ಅಥವಾ ಹತ್ಯೆಯನ್ನು ನಿರೂಪಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಶರ್ಮಾ ಹೇಳಿದ್ದಾರೆ.

‘‘ಸಿಬಿಐ ಸಾಕ್ಷಿಗಳನ್ನು ಬಲವಂತಪಡಿಸಿ, ಒತ್ತಡ ಹೇರಿದೆ’’
ಒಂದು ವರ್ಷಕ್ಕಿಂತ ಹೆಚ್ಚು ಕಾಲ ನಡೆದ ವಿಚಾರಣೆ ಯಲ್ಲಿ 210 ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ. ಇವರಲ್ಲಿ ಪ್ರತ್ಯಕ್ಷದರ್ಶಿಗಳು, ಪೊಲೀಸರು ಹಾಗೂ ತಜ್ಞರು ಸೇರಿದ್ದಾರೆ. ಈ ಪೈಕಿ ಹಲವು ಪ್ರಮುಖ ಸಾಕ್ಷಿಗಳೂ ಸೇರಿದಂತೆ 92 ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ವ್ಯತಿರಿಕ್ತ ಹೇಳಿಕೆ ನೀಡಿದ ಇತರ ಸಾಕ್ಷಿಗಳಲ್ಲಿ ಹಲವು ಮಂದಿ ಹಿಂದಿನ ಹೇಳಿಕೆಗಳಿಗೆ ಸಂಪೂರ್ಣವಾಗಿ ಬದ್ಧರಾಗಿ ಉಳಿದಿಲ್ಲ. ಹಿಂದಿನ ಅನುಭವಗಳಿಂದ ತಿಳಿದುಬರುವಂತೆ, ಸಾಕ್ಷಿಗಳು ನೀಡಿರುವ ವ್ಯತಿರಿಕ್ತ ಹೇಳಿಕೆ, ವಿಚಾರಣೆ ವೇಳೆ ಅನುಭವಿಸಿದ ಬಲಾತ್ಕಾರ ಮತ್ತು ದಾಳಿಯ ಫಲ ಎಂದು ಹೇಳಿದ ನ್ಯಾಯಾಧೀಶ ಶರ್ಮಾ ಅವರು ‘‘ಸಿಬಿಐ ಈ ಮೊದಲು ಸಾಕ್ಷಿಗಳ ಹೇಳಿಕೆ ಪಡೆಯಲು ಬಲಾತ್ಕಾರದ ವಿಧಾನವನ್ನು ಅನುಸರಿಸಿದೆ’’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಲಯದ ಪ್ರಕಾರ ಇಡೀ ತನಿಖೆಯ ವೇಳೆ ರಾಜಕಾರಣಿಗಳನ್ನು ಸಿಲುಕಿಸುವ ಉದ್ದೇಶವನ್ನು ಸಾಧಿಸಲು ಹೆಣೆದ ಕಟ್ಟುಕಥೆಗೆ ಪೂರಕವಾಗಿ ಹೇಗಾದರೂ ಮಾಡಿ ಸಿಬಿಐ ಪುರಾವೆಗಳನ್ನು ಸೃಷ್ಟಿಸಿದೆ ಮತ್ತು ಅಪರಾಧ ದಂಡಸಂಹಿತೆಯ ಸೆಕ್ಷನ್ 161ರ ಅನ್ವಯ ಹೇಳಿಕೆಗಳನ್ನು ದಾಖಲಿಸಿದೆ. ಅಪರಾಧ ಸಂಹಿತೆಯ ಸೆಕ್ಷನ್ 164ರಡಿ ಜಿಲ್ಲಾ ಮ್ಯಾಜಿಸ್ಟ್ರೇಟರ ಎದುರು ದಾಖಲಿಸಿಕೊಂಡ ಹೇಳಿಕೆಗಳು ಪ್ರಬಲ ಎಂದು ಪರಿಗಣಿಸಲಾಗಿದ್ದರೂ, ವಿಚಾರಣೆ ವೇಳೆ ಸ್ವೀಕರಿಸುವ ಪುರಾವೆಗಳು ಭಿನ್ನ. ಮ್ಯಾಜಿಸ್ಟ್ರೇಟರ ಮುಂದೆ ಪೂರ್ವನಿರ್ಧರಿತ ಹೇಳಿಕೆಗಳನ್ನು ನೀಡುವಂತೆ ಸಾಕ್ಷಿಗಳನ್ನು ಬಲಾತ್ಕರಿಸಲಾಗಿದೆ. ಅಂತಿಮವಾಗಿ ಸಾಕ್ಷಿಗಳು ವಿಶೇಷ ಸಿಬಿಐ ನ್ಯಾಯಾಲಯದ ಎದುರು ಸತ್ಯ ಹೇಳಿದ್ದಾರೆ ಎಂದು ವಿಚಾರಣಾ ನ್ಯಾಯಾಲಯ ಹೇಳಿದೆ. ಒಬ್ಬ ಸಿಬಿಐ ಅಧಿಕಾರಿಯೂ ಸೇರಿದಂತೆ ಕೆಲ ಸಾಕ್ಷಿಗಳು, ಸಿಬಿಐಗೆ ಅನುಕೂಲಕರವಾಗುವ ಹೇಳಿಕೆಗಳನ್ನು ನೀಡುವಂತೆ ಹೇಗೆ ಬಲವಂತಪಡಿಸಲಾಯಿತು ಎನ್ನುವುದನ್ನು ವಿವರಿಸುತ್ತಾ ವಿಚಾರಣೆ ವೇಳೆ ಅತ್ತಿದ್ದರು ಎಂದೂ ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಇದರ ಆಯ್ದ ಭಾಗವನ್ನು ನ್ಯಾಯಾಧೀಶರು ವರದಿಗಾರರಿಗೆ ಓದಿ ಹೇಳಿದ್ದಾರೆ.
ವ್ಯತಿರಿಕ್ತ ಹೇಳಿಕೆ ನೀಡಿದ ಸಾಕ್ಷಿಗಳು ಸಿಬಿಐ ರೂಪಿಸಿದ ರಾಜಕೀಯ ಪಿತೂರಿಯ ಬಲಿಪಶುಗಳಾಗಿರುವುದರಿಂದ ಅವರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಮುಂದುವರಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹತ್ಯೆಗೆ ಸಿಗದ ಶಿಕ್ಷೆ ಬಗ್ಗೆ ಕಳವಳ ಮತ್ತು ವಿಷಾದ
ತಮ್ಮ ತೀರ್ಪಿನ ಉಪಸಂಹಾರ ಭಾಗದಲ್ಲಿ ಶರ್ಮಾ ಅವರು, ಸಮಾಜಕ್ಕೆ ಆಗಬಹುದಾದ ಅದರಲ್ಲೂ ಮುಖ್ಯವಾಗಿ ಮೃತರ ಕುಟುಂಬಕ್ಕೆ ಆಗಬಹುದಾದ ಕಳವಳ ಮತ್ತು ಹತಾಶೆಯ ಪ್ರಮಾಣದ ಬಗ್ಗೆ ಅರಿವಿಲ್ಲದೇ, ಇಂಥ ಗಂಭೀರ ಅಪರಾಧಗಳಲ್ಲಿ ಶಿಕ್ಷೆಯಾಗುತ್ತಿಲ್ಲ. ಆದರೆ ನೈತಿಕ ಶಿಕ್ಷೆ ಅಥವಾ ಸಂದೇಹದ ಆಧಾರದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಕಾನೂನು ಅನುಮತಿ ನೀಡುವುದಿಲ್ಲ. ಅಪರಾಧ ವಿಚಾರಣೆಯಲ್ಲಿ ಸತ್ಯದ ಹೊರೆ ಎಂದೂ ವರ್ಗಾವಣೆಯಾಗುವುದಿಲ್ಲ ಹಾಗೂ ಸ್ವೀಕಾರಾರ್ಹ ಪುರಾವೆಯ ಆಧಾರದಲ್ಲಿ ತಾರ್ಕಿಕ ಸಂದೇಹಗಳನ್ನು ಮೀರಿ ಇದನ್ನು ನಿರೂಪಿಸುವುದು ಅಭಿಯೋಜಕರ ಹೊಣೆಯಾಗಿರುತ್ತದೆ ಎಂದು ಹೇಳಿದ್ದಾರೆ.

ವಿಷಾದ ವ್ಯಕ್ತಪಡಿಸಿದ ನ್ಯಾಯಾಧೀಶರು, ‘‘ಸೊಹ್ರಾಬುದ್ದೀನ್ ಹಾಗೂ ತುಳಸೀರಾಂ ಹತ್ಯೆ ಎನ್ನಲಾದ ಅಪರಾಧಕ್ಕೆ ಶಿಕ್ಷೆ ವಿಧಿಸಲಾಗದಿರುವುದು ವಿಷಾದದ ಸಂಗತಿ ಎನ್ನುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಸೊಹ್ರಾಬುದ್ದೀನ್ ಪತ್ನಿ ಕೌಸರ್ ಬಿ ಕಣ್ಮರೆಯಾಗಿರುವುದು ಹಾಗೂ ಸಿಬಿಐ ತನಿಖೆ ನಡೆಸಿ ಹೇಳಿದಂತೆ ಆಕೆಯನ್ನು ಹತ್ಯೆ ಮಾಡಿ ಬೆಂಕಿ ಹಚ್ಚಿ ಸುಟ್ಟಿರುವುದಕ್ಕೆ ಪುರಾವೆಗಳ ಕೊರತೆಯಿಂದಾಗಿ ಶಿಕ್ಷೆ ವಿಧಿಸಲಾಗುತ್ತಿಲ್ಲ. ಆದಾಗ್ಯೂ, ದಾಖಲೆಗಳ ಕಾರಣಕ್ಕಾಗಿ, ನೈತಿಕ ಅಥವಾ ಊಹಾತ್ಮಕ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡುವುದು ಸಾಧ್ಯ ವಿಲ್ಲ. ಆದ್ದರಿಂದ, ಆರೋಪಿಗಳು ತಪ್ಪಿತಸ್ಥರಲ್ಲ ಹಾಗೂ ಅವ ರನ್ನು ದೋಷಮುಕ್ತಗೊಳಿಸಬೇಕಾಗಿದೆ ಎಂಬ ನಿರ್ಧಾರಕ್ಕೆ ಬಾರದೇ ಬೇರೆ ಆಯ್ಕೆಯೇ ಇಲ್ಲ’’ ಎಂದಿದ್ದಾರೆ.


ಕೃಪೆ: thewire.in

Writer - ಸುಕನ್ಯಾ ಶಾಂತಾ

contributor

Editor - ಸುಕನ್ಯಾ ಶಾಂತಾ

contributor

Similar News