ಊರ್ಜಿತ್ ಪಟೇಲ್ ರಾಜೀನಾಮೆ ಸುತ್ತಮುತ್ತ

Update: 2019-01-01 18:49 GMT

ಸರಕಾರ ಹಾಗೂ ಆರ್‌ಬಿಐ ನಡುವಿನ ಭಿನ್ನಾಭಿಪ್ರಾಯ ಬೆಳೆದು ತೀವ್ರವಾಯಿತು. ಪಟೇಲ್ ರಾಜೀನಾಮೆ ನೀಡುತ್ತಾರೆ ಅನ್ನುವ ಸುದ್ದಿಯೂ ಹರಡಿತು. ಆದರೆ ಸ್ವಲ್ಪ ದಿನಗಳಲ್ಲೇ ಎರಡೂ ಗುಂಪಿನ ನಡುವೆ ಸಾಮರಸ್ಯ ಏರ್ಪಟ್ಟಿದೆ, ವಿವಾದ ಪರಿಹಾರವಾಗಿದೆ, ಎಲ್ಲವೂ ಸರಿಹೋಗಿದೆ ಅನ್ನುವ ವರದಿಗಳು ಕೇಳಿಬಂದವು. ಇದಕ್ಕೆ ಪೂರಕವಾಗಿ ಹಣಕಾಸು ನೀತಿ ಸಮಿತಿಯ ಸಭೆ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹೀಗೆ ಎಲ್ಲವೂ ಸರಿಹೋಯಿತು ಅಂದುಕೊಂಡಿದ್ದಾಗ ಇದ್ದಕ್ಕಿದ್ದ ಹಾಗೆ ಪಟೇಲ್ ರಾಜೀನಾಮೆ ಕೊಟ್ಟರು. ಅದಕ್ಕೆ ಕಾರಣ ಏನಿರಬಹುದು? ಬಹುಶಃ ಅವರೇ ಒಂದು ಆತ್ಮಚರಿತ್ರೆಯನ್ನೋ, ನೆನಪುಗಳನ್ನೋ ಬರೆದು ದಾಖಲಿಸಿದರೆ ಗೊತ್ತಾಗಬಹುದು.


ಊರ್ಜಿತ್ ಪಟೇಲ್ ಅವರ ರಾಜೀನಾಮೆ ನಿರೀಕ್ಷಿತವೇ. ತಾನು ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಅಂದರೂ ಅದು ನಿಜ ಅನ್ನಿಸುವುದಿಲ್ಲ. ‘‘ಸಾರ್ವಜನಿಕ ಅಧಿಕಾರಿಯೊಬ್ಬ ರಾಜೀನಾಮೆ ಕೊಡುವುದು ಒಂದು ರೀತಿಯ ಪ್ರತಿಭಟನೆಯಾಗಿರುತ್ತದೆ’’ ಅಂತ ರಘುರಾಂ ರಾಜನ್ ಇತ್ತೀಚೆಗೆ ಹೇಳಿದ ಮಾತು ಬಹುಶಃ ಸತ್ಯವಿರಬಹುದು. ಆರ್‌ಬಿಐನಲ್ಲಿನ ರಿಸರ್ವ್ ಫಂಡ್ ಬಳಕೆಯ ಬಗ್ಗೆ ಎದ್ದಿರುವ ವಿವಾದ, ಸರಕಾರದ ಕೆಲವು ಆರ್ಥಿಕ ನಡೆಗಳನ್ನು ಕುರಿತಂತೆ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿದರೆ ಇದು ಸ್ಪಷ್ಟ ಅನ್ನಿಸುತ್ತದೆ. ಈ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್ ಅವರು ಹೇಳಿರುವಂತೆ ರಾಜೀನಾಮೆಯ ಘಟನೆ ಒಂದು ದುರಂತ ಅನ್ನುವುದು ನಿಜ. ಆರ್‌ಬಿಐ, ಸಿಬಿಐ ಅಂತಹ ಸಂಸ್ಥೆಗಳು ಸ್ವಾಯುತ್ತ ಸಂಸ್ಥೆಗಳಾಗಿ ಉಳಿಯಬೇಕು ಎಂದು ಗಂಭೀರವಾಗಿ ಪರಿಗಣಿಸುವ ಪ್ರತಿಯೊಬ್ಬರೂ ಹೀಗೆ ಭಾವಿಸುತ್ತಾರೆ ಅಂದುಕೊಂಡಿದ್ದೇನೆ. ಅಷ್ಟೇ ಅಲ್ಲ, ಮುಂದೆ ಪಟೇಲ್ ಅವರ ಸ್ಥಾನಕ್ಕೆ ಬರುವ ಅಧಿಕಾರಿಯನ್ನ್ನು ಕೂಡ ಈ ಸ್ವಾಯುತ್ತತೆಯ ಹಾಗೂ ಸ್ವತಂತ್ರ ನಿಲುವಿನ ಹಿನ್ನೆಲೆಯಲ್ಲಿ ಅಳೆಯುವುದು ನಮಗೆ ಅನಿವಾರ್ಯವಾಗುತ್ತದೆ.

ರಘುರಾಂ ರಾಜನ್ ವಿವಾದ, ಅರವಿಂದ್ ಪಾನಗಾರಿಯ ರಾಜೀನಾಮೆ, ನಂತರ ಅರವಿಂದ್ ಸುಬ್ರಮಣಿಯನ್ ರಾಜೀನಾಮೆ ಹಾಗೂ ಇತ್ತೀಚೆಗೆ ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿಯ ಆರ್ಥಿಕ ತಜ್ಞ ಸುರ್ಜಿತ್ ಭಲ್ಲಾ ಅವರ ರಾಜೀನಾಮೆ (ಇವರು 2017ರಲ್ಲಿ 17 ಮಿಲಿಯನ್ ಉದ್ಯೋಗ ಸೃಷ್ಟಿಯಾಗಿತ್ತು ಅಂತ ಅಂಕಿ ಅಂಶ ಸೃಷ್ಟಿಸಿದ್ದ ಖ್ಯಾತರು.) ಇವೆಲ್ಲಾ ಸಂತಸದ ವಿಷಯಗಳಲ್ಲ. ಅಷ್ಟೇ ಅಲ್ಲ ಅವರಲ್ಲಿ ಕೆಲವರು ತಮ್ಮ ಅಧಿಕಾರದ ಅವಧಿಯಲ್ಲಿ ಚಾಲ್ತಿಗೆ ತಂದ ಆರ್ಥಿಕ ನೀತಿಗಳಿಂದ ಆದ ದುರಂತದ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಸರಕಾರ ಮತ್ತು ಆರ್‌ಬಿಐ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಸರಕಾರ ತನ್ನ ವಿತ್ತೀಯ ಕೊರತೆಯನ್ನು ಕಡಿತಗೊಳಿಸಲು ಆರ್‌ಬಿಐ ರಿಸರ್ವ್ ಫಂಡ್ ಅನ್ನು ಬಳಸಿಕೊಳ್ಳುವ ಇಚ್ಛೆಯನ್ನು ಹಲವು ಬಾರಿ ವ್ಯಕ್ತಪಡಿಸಿದೆ. ಅದಕ್ಕಾಗಿ ಒತ್ತಾಯವನ್ನೂ ಮಾಡಿದೆ. ಹೀಗೆ ಖರ್ಚು ಮಾಡಿದ ಹಣವೂ ವಿತ್ತೀಯ ಕೊರತೆಯ ಲೆಕ್ಕಚಾರದಲ್ಲಿ ಬರುವುದಿಲ್ಲವಾದ್ದರಿಂದ ವಿತ್ತೀಯ ಕೊರತೆ ಮಿತಿಯಲ್ಲೇ ಇದೆ ಎಂದು ಸರಕಾರ ಹೇಳಿಕೊಳ್ಳಬಹುದು. ಆದರೆ ದೀರ್ಘಕಾಲೀನ ಆರ್ಥಿಕ ಸ್ಥಿರತೆಯ ದೃಷ್ಟಿಯಿಂದ ಇದು ಸರಿಯಲ್ಲ ಎಂಬುದು ಆರ್‌ಬಿಐ ವಾದ.

ಕೇಂದ್ರೀಯ ಬ್ಯಾಂಕು ನಷ್ಟ ಅನುಭವಿಸುತ್ತಿರುವ ಬ್ಯಾಂಕುಗಳ ಮೇಲೆ ವಿಧಿಸಿರುವ ಅಡ್ಡಿಗಳನ್ನು ಸರಳಗೊಳಿಸಬೇಕೆಂಬುದು ಸರಕಾರದ ಇನ್ನೊಂದು ಬೇಡಿಕೆ. ಅದರಿಂದ ಪ್ರಧಾನ ಮಂತ್ರಿಗಳ ಬಯಕೆಯಂತೆ ಸಣ್ಣ ಉದ್ದಿಮೆಗಳಿಗೆ ಸಾಲ ಕೊಡಬಹುದು. ಅಷ್ಟೇ ಅಲ್ಲ ತಮಗೆ ಬೇಕಾದ ಕಾರ್ಪೊರೇಟ್ ಸಂಸ್ಥೆಗಳಿಗೂ ಸಾಲಕೊಡುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಆರ್‌ಬಿಐ ದೃಷ್ಟಿಯಲ್ಲಿ ಹೀಗೆ ಮಾಡಿದರೆ ತೀರಿಸಲಾಗದ ಸಾಲದ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತದೆ. ಹಾಗಾಗಿ ಇಂತಹ ಜನಪ್ರಿಯ ಯೋಜನೆಗಳನ್ನು ಒಪ್ಪಿಕೊಂಡು ಅದಕ್ಕೆ ಸಹಕಾರ ನೀಡುವುದಕ್ಕೆ ಸಾಧ್ಯವಿಲ್ಲ. ಹೀಗೆ ಹಲವಾರು ಬೇಡಿಕೆಗಳು ಅವರಿಗಿತ್ತು. ಆದರೆ ಪಟೇಲ್ ತಂಡ ಇದಕ್ಕೆ ಅಷ್ಟೊಂದು ಉತ್ಸಾಹಕರ ಪ್ರತಿಕ್ರಿಯೆಯನ್ನು ತೋರುತ್ತಿರಲಿಲ್ಲ.

ಆದರೆ ಚುನಾವಣೆ ಹತ್ತಿರದಲ್ಲಿರುವುದರಿಂದ ಒಂದಿಷ್ಟು ಜನಪ್ರಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಸರಕಾರಕ್ಕೆ ರಾಜಕೀಯವಾಗಿ ಅನಿವಾರ್ಯವಾಗಿತ್ತು. ಹಾಗಾಗಿ ಆರ್‌ಬಿಐನ ಮಂಡಳಿಯನ್ನು ತನ್ನ ಉದ್ದೇಶಕ್ಕೆ ಬಳಸಿಕೊಳ್ಳುವ ದಾರಿಹಿಡಿಯಲು ಸರಕಾರ ನಿರ್ಧರಿಸಿತು. ಮಂಡಳಿಯಲ್ಲಿರುವ ತನ್ನ ಬೆಂಬಲಿಗರ ಮೂಲಕ, ಆರ್‌ಬಿಐ ಮೇಲೆ ಒತ್ತಡ ಹೇರಲು ಪ್ರಾರಂಭಿಸಿತು. ಈ ರೀತಿಯ ಹಸ್ತಕ್ಷೇಪವನ್ನು ಒಪ್ಪಿಕೊಳ್ಳುವುದು ಹಲವರಿಗೆ ಕಷ್ಟವಾಯಿತು. ಡೆಪ್ಯುಟಿ ಗವರ್ನರ್ ವಿರಾಲ್ ಆಚಾರ್ಯ ಅವರು ಬಹಿರಂಗವಾಗಿಯೇ ಅದನ್ನು ವಿರೋಧಿಸಿದರು. ಆದರೆ ಸರಕಾರದ ಪರವಾದ ಮಂಡಳಿಯ ಸದಸ್ಯರು ಈ ರೀತಿಯ ಟೀಕೆಯನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಕೇಂದ್ರಿಯ ಬ್ಯಾಂಕಿನ ಕಾಯ್ದೆಯಲ್ಲೇ ಇದಕ್ಕೆ ಅವಕಾಶವಿದೆ. ಮಂಡಳಿಯ ನಿರ್ಧಾರವನ್ನು ಆರ್‌ಬಿಐ ಮಾನ್ಯಮಾಡಬೇಕು ಎಂಬುದು ಅವರ ವಾದವಾಗಿತ್ತು. ಇದನ್ನು ಆರೆಸ್ಸೆಸ್‌ನ ಸಿದ್ಧಾಂತಿ ಹಾಗೂ ಆರ್‌ಬಿಐ ಮಂಡಳಿಯ ಸದಸ್ಯರೂ ಆದ ಎಸ್. ಗುರುಮೂರ್ತಿ ಅವರು ತಮ್ಮ ಹೇಳಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.

ಸರಕಾರ ಇಲ್ಲಿಗೆ ನಿಲ್ಲದೆ ಆರ್‌ಬಿಐ ಕಾಯ್ದೆಯ 7ನೇ ಸೆಕ್ಷನ್ ಬಳಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಯಿತು. ಸಾಮಾನ್ಯವಾಗಿ ಕೇಂದ್ರ ಬ್ಯಾಂಕ್ ಸರಕಾರದಿಂದ ಆದೇಶಗಳನ್ನು ಪಡೆದುಕೊಳ್ಳುವ ಆವಶ್ಯಕತೆಯಿಲ್ಲ. ಆದರೆ ಈ ಸೆಕ್ಷನ್ ಪ್ರಕಾರ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕೇಂದ್ರ ಬ್ಯಾಂಕಿಗೆ ನಿರ್ದೇಶನಗಳನ್ನು ಕೊಡಲು ಸರಕಾರಕ್ಕೆ ಅವಕಾಶವಿದೆ. ಸರಕಾರ ಈ ಕಾಯ್ದೆಯನ್ನು ಬಳಸಿಕೊಂಡರೆ ಅದು ಬ್ಯಾಂಕಿನ ಸ್ವಾಯತ್ತತೆಗೆ ಭಂಗ ತಂದಂತೆ ಎಂದು ಹಲವರು ಭಾವಿಸಿದ್ದರಲ್ಲಿ ತಪ್ಪೇನೂ ಇಲ್ಲ. ಹೀಗೆ ಸರಕಾರ ಹಾಗೂ ಆರ್‌ಬಿಐ ನಡುವಿನ ಭಿನ್ನಾಭಿಪ್ರಾಯ ಬೆಳೆದು ತೀವ್ರವಾಯಿತು. ಪಟೇಲ್ ರಾಜೀನಾಮೆ ನೀಡುತ್ತಾರೆ ಅನ್ನುವ ಸುದ್ದಿಯೂ ಹರಡಿತು. ಆದರೆ ಸ್ವಲ್ಪ ದಿನಗಳಲ್ಲೇ ಎರಡೂ ಗುಂಪಿನ ನಡುವೆ ಸಾಮರಸ್ಯ ಏರ್ಪಟ್ಟಿದೆ, ವಿವಾದ ಪರಿಹಾರವಾಗಿದೆ, ಎಲ್ಲವೂ ಸರಿಹೋಗಿದೆ ಅನ್ನುವ ವರದಿಗಳು ಕೇಳಿಬಂದವು. ಇದಕ್ಕೆ ಪೂರಕವಾಗಿ ಹಣಕಾಸು ನೀತಿ ಸಮಿತಿಯ ಸಭೆ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹೀಗೆ ಎಲ್ಲವೂ ಸರಿಹೋಯಿತು ಅಂದುಕೊಂಡಿದ್ದಾಗ ಇದ್ದಕ್ಕಿದ್ದ ಹಾಗೆ ಪಟೇಲ್ ರಾಜೀನಾಮೆ ಕೊಟ್ಟರು. ಅದಕ್ಕೆ ಕಾರಣ ಏನಿರಬಹುದು? ಬಹುಶಃ ಅವರೇ ಒಂದು ಆತ್ಮಚರಿತ್ರೆಯನ್ನೋ, ನೆನಪುಗಳನ್ನೋ ಬರೆದು ದಾಖಲಿಸಿದರೆ ಗೊತ್ತಾಗಬಹುದು. ಬಹುಶಃ ಯಾವುದೇ ಅರ್ಥಶಾಸ್ತ್ರಜ್ಞ ಅಥವಾ ಪರಿಣತನಿಗೂ ಇಂದು ಭಾರತೀಯ ಆರ್ಥಿಕತೆಯಲ್ಲಿ ಆಗಿರುವ ರಾಡಿಯಲ್ಲಿ ಭಾಗಿಯಾಗಲು ಇಷ್ಟವಿಲ್ಲ ಅನ್ನಿಸುತ್ತದೆ. ಈಗ ಶಶಿಕಾಂತ ದಾಸ್ ಅವರನ್ನು ತೆರವಾದ ಜಾಗಕ್ಕೆ ನೇಮಕ ಮಾಡಿದ್ದಾರೆ.

ತಮಿಳುನಾಡು ಕೇಡರಿನ 1980ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ದಾಸ್ ಅವರು ಈಗಾಗಲೇ ಹಲವು ಹಣಕಾಸು ಸಂಬಂಧಿಸಿದ ಖಾತೆಗಳಲ್ಲಿ ಕೆಲಸ ಮಾಡಿದ್ದಾರೆ. ಕಳೆದ ಎರಡು ಗವರ್ನರುಗಳು ಅರ್ಥಶಾಸ್ತ್ರಜ್ಞರಾಗಿದ್ದರು. ದಾಸ್ ಅವರ ನೇಮಕದಿಂದ ಮತ್ತೆ ಅದು ಅಧಿಕಾರಶಾಹಿಯ ಕೈಗೆ ಹೋಗಿದೆ. ನೋಟು ಅಮಾನ್ಯವಾದ ತಕ್ಷಣ ಅದನ್ನು ಅವರು ಪ್ರಬಲವಾಗಿ ಬೆಂಬಲಿಸಿದ್ದರು. ‘‘500 ಹಾಗೂ ಸಾವಿರ ರೂಪಾಯಿ ನೋಟುಗಳನ್ನು ಅಮಾನ್ಯ ಮಾಡುವುದರಿಂದ ಕಪ್ಪುಆರ್ಥಿಕತೆ ನಿರ್ಮೂಲನವಾಗುತ್ತದೆ. ಕೋಟಾನೋಟುಗಳಿಗೆ ಕಡಿವಾಣ ಬೀಳುತ್ತದೆ.’’ ಇತ್ಯಾದಿ ವಾದಗಳನ್ನು ಮುಂದಿಟ್ಟಿದ್ದರು. ಸರಕಾರದ ಪರವಾದ ಅವರ ನಿಲುವಿನಿಂದ ಗವರ್ನರ್ ಆಗಿ ಅವರ ದಕ್ಷತೆಯನ್ನು ನಿರ್ಧರಿಸಬೇಕಾಗಿಲ್ಲ. ಆದರೆ ಆಯ್ಕೆಯ ಹಿನ್ನೆಲೆಯಲ್ಲಿ ರಾಜಕೀಯ ಲೆಕ್ಕಾಚಾರವನ್ನು ಪೂರ್ಣವಾಗಿ ತಳ್ಳಿಹಾಕುವ ಹಾಗಿಲ್ಲ. ಜೊತೆಗೆ ಅವರ ಪ್ರತಿ ನಿರ್ಧಾರವನ್ನೂ ಜನ ಈ ಹಿನ್ನೆಲೆಯಲ್ಲಿ ನೋಡುವುದು ಕೂಡ ಸ್ವಾಭಾವಿಕವೆ.

ಹೊಸ ಗವರ್ನರ್ ನೇಮಕವಾಗಿದೆ. ಆದರೆ ಮೂಲ ಸಮಸ್ಯೆ ಪರಿಹಾರವಾಗಿಲ್ಲ. ಬಿಕ್ಕಟ್ಟಿಗೆ ಒಂದು ಪರಿಹಾರ ಕಂಡುಕೊಳ್ಳಬೇಕು. ಸರಕಾರವಾಗಲಿ, ಕೇವಲ ಗವರ್ನರ್ ಆಗಲಿ ನಿರ್ಧಾರ ತೆಗೆದುಕೊಳ್ಳುವಂತೆ ಆಗಬಾರದು. ದೇಶದ ಒಟ್ಟಾರೆ ಹಿತದೃಷ್ಟಿಯಿಂದ ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯವಸ್ಥೆ ನಿರ್ಮಾಣವಾಗುವ ಕಡೆ ನಮ್ಮ ಪ್ರಯತ್ನ ಇರಬೇಕು.

ಆದರೆ ಇಂದು ಎಲ್ಲವನ್ನು ರಾಜಕೀಯವೇ ನಿರ್ಧರಿಸುತ್ತದೆ. ನೋಟು ಅಮಾನ್ಯೀಕರಣದಿಂದ ಮೊದಲ್ಗೊಂಡು ಪ್ರತಿಯೊಂದು ಆರ್ಥಿಕ ನಿರ್ಧಾರಗಳನ್ನೂ ರಾಜಕೀಯ ಆಸಕ್ತಿಗಳೇ ನಿರ್ಧರಿಸುತ್ತಿರುವುದು ದುರಂತ. ರಾಜಕೀಯ ಮುಖ್ಯವಾದಾಗ ಸ್ವಾಭಾವಿಕವಾಗಿಯೇ ಸ್ವಂತಂತ್ರವಾಗಿ ಮತ್ತು ಭಿನ್ನವಾಗಿ ಚಿಂತಿಸುವವರು ಇಷ್ಟವಾಗುವುದಿಲ್ಲ. ಪರಿಣತರ ಅಭಿಪ್ರಾಯಗಳು ನಮಗೆ ಹಿತವಾಗುವುದಿಲ್ಲ. ಪ್ರತಿಯೊಂದು ಸಂಸ್ಥೆಗಳೂ ನಮ್ಮ ನಿಯಂತ್ರಣದಲ್ಲಿರಬೇಕು ಅಂತ ಬಯಸುವ ಪ್ರವೃತ್ತಿ ಬಂದುಬಿಡುತ್ತದೆ. ಮಾಹಿತಿಗಳನ್ನು ನಮಗೆ ಬೇಕಾದ ಹಾಗೆ ರೂಪಿಸಿಕೊಂಡು ಬಿಡುತ್ತೇವೆ. ಇತ್ತೀಚೆಗೆ ಜಿಡಿಪಿ ಲೆಕ್ಕಾಚಾರದಲ್ಲಿ ಅನುಸರಿಸುತ್ತಿರುವ ಕ್ರಮ ಕೂಡ ಉತ್ತರಕ್ಕಿಂತ ಪ್ರಶ್ನೆಗಳನ್ನೇ ಹೆಚ್ಚಾಗಿ ಹುಟ್ಟು ಹಾಕುತ್ತಿದೆ. ಸರಿಯಾದ ನಿಯಮಗಳನ್ನು ರೂಪಿಸಲು ಸರಿಯಾದ ಅಂಕಿಅಂಶಗಳು ಆವಶ್ಯಕ. ಸರಿಯಾದ ಅಂಕಿಅಂಶಗಳು ನಿಜವಾಗಿ ನಮ್ಮ ಆರ್ಥಿಕತೆಯ ಸ್ಥಿತಿಗತಿಗಳ ಕನ್ನಡಿ. ಆದರೆ ಈಗ ನಾವು ಬೇರೆಯವರಿಗಿಂತ ಉತ್ತಮವಾಗಿ ಆಡಳಿತ ನಡೆಸುತ್ತಿದ್ದೇವೆ ಅಂತ ತೋರಿಸಿಕೊಳ್ಳುವುದಕ್ಕೆ ಅಂಕಿಅಂಶಗಳನ್ನು ಸೃಷ್ಟಿಸುತ್ತಿದ್ದೇವೆ.

ನಮ್ಮ ಗಮನ ದೇಶದ ಆರ್ಥಿಕ ಬೆಳೆವಣಿಗೆಯ ಕಡೆ ಇಲ್ಲದೇ ಹೋದರೆ, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಕ್ರುಗ್‌ಮನ್ ಹೇಳಿರುವಂತೆ ನಿರುದ್ಯೋಗ ಇತ್ಯಾದಿ ದುರಂತಗಳ ಭಾರದಲ್ಲಿ ನಿಜವಾಗಿಯೂ ನಮ್ಮ ಆರ್ಥಿಕತೆ ಕುಸಿದು ಹೋಗುತ್ತದೆ. ಉದ್ಯೋಗ ಬೆಳೆವಣಿಗೆ ಸ್ಥಗಿತಗೊಂಡಿದೆ ಅಥವಾ ನಿಧಾನವಾಗಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಹೆಚ್ಚುಕಡಿಮೆ ನೆಲಕಚ್ಚಿವೆ. ಕರೆಂಟ್ ಅಕೌಂಟ್ ಕೊರತೆ ಹೆಚ್ಚುತ್ತಿದೆ. ಬಂಡವಾಳದ ಹರಿವು ಸ್ಥಿರವಾಗಿಲ್ಲ. ಇಂತಹ ಆರ್ಥಿಕ ಪರಿಸ್ಥಿತಿಯಲ್ಲಿ ಎಲ್ಲಾ ಸಂಸ್ಥೆಗಳನ್ನು ಅದರಷ್ಟಕ್ಕೆ ಸ್ವಾಯತ್ತವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಬಿಡುವುದು ಸೂಕ್ತ. ರಾಜಕೀಯ ಲೆಕ್ಕಾಚಾರವನ್ನು ಮೀರಿಕೊಂಡು ಒಳ್ಳೆಯ ಪರಿಣತರ ಸೇವೆಯನ್ನು ಬಳಸಿಕೊಳ್ಳುವುದರ ಮೂಲಕ ಅಂತಹ ಸಂಸ್ಥೆಗಳನ್ನು ಬಲಗೊಳಿಸುವ ದಿಕ್ಕಿನಲ್ಲಿ ಕೆಲಸ ಮಾಡುವುದು ದೇಶಕ್ಕೆ ಒಳ್ಳೆಯದು. ನಮ್ಮ ಶಕ್ತಿಯನ್ನೆಲ್ಲಾ ದೇಶದ ಒಳಿತಿನ ದೃಷ್ಟಿಯಿಂದ ಸೂಕ್ತ ಯೋಜನೆಗಳನ್ನು ರೂಪಿಸುವುದಕ್ಕೆ ಬಳಸಿಕೊಂಡು ಜನರ ಹಿತಾಸಕ್ತಿಯನ್ನು ಕಾಪಾಡುವುದು ಸೂಕ್ತ.

Writer - ಟಿ. ಎಸ್. ವೇಣುಗೋಪಾಲ್

contributor

Editor - ಟಿ. ಎಸ್. ವೇಣುಗೋಪಾಲ್

contributor

Similar News