ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಳ್ಳದೆ ರಾಮಮಂದಿರ ಸುಗ್ರೀವಾಜ್ಞೆಯಿಲ್ಲ: ಮೋದಿ ಹೇಳಿಕೆಗೆ ಆರೆಸ್ಸೆಸ್ ಸ್ವಾಗತ

Update: 2019-01-02 08:40 GMT

ನಾಗ್ಪುರ, ಜ.2: ಸಂವಿಧಾನದ ಚೌಕಟ್ಟಿನಲ್ಲಿ ಅಯೋಧ್ಯೆ ವಿವಾದಕ್ಕೆ ಪರಿಹಾರ ದೊರೆಯುವುದು ಹಾಗೂ ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಸುಗ್ರೀವಾಜ್ಞೆ ಜಾರಿ ಪರಿಗಣಿಸಬಹುದೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದನ್ನು ಆರೆಸ್ಸೆಸ್ ಸ್ವಾಗತಿಸಿದೆ.

‘‘ಪ್ರಧಾನಿಯ ಹೇಳಿಕೆಯು ರಾಮ ಮಂದಿರ ನಿರ್ಮಾಣ ಕುರಿತಂತೆ ಒಂದು ಸಕಾರಾತ್ಮಕ ಹೆಜ್ಜೆ ಎಂದು ನಾವು ತಿಳಿದುಕೊಳ್ಳುತ್ತೇವೆ. ಅವರ ಹೇಳಿಕೆ ಬಿಜೆಪಿ 1989ರಲ್ಲಿ ಕೈಗೊಂಡ ಪಾಲಂಪುರ್ ನಿರ್ಣಯದ ಅನುಸಾರವಾಗಿಯೇ ಇದೆ. ಅಯೋಧ್ಯೆಯಲ್ಲಿ ವೈಭವೋಪೇತ ರಾಮ ಮಂದಿರವನ್ನು ಎರಡು ಸಮುದಾಯಗಳ ನಡುವೆ ಪರಸ್ಪರ ಮಾತುಕತೆ ಮೂಲಕ ಇಲ್ಲವೇ ಕಾನೂನು ಜಾರಿ ಮೂಲಕ ನಿರ್ಮಿಸುವ ನಿಟ್ಟಿನಲ್ಲಿ ಅಂದು ನಿರ್ಣಯ ಕೈಗೊಳ್ಳಲಾಗಿತ್ತು’’ ಎಂದು ಆರೆಸ್ಸೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘‘ನರೇಂದ್ರ ಮೋದಿ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದ್ದ 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ರಾಮ ಮಂದಿರ ನಿರ್ಮಾಣಕ್ಕಿರುವ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುವ ಭರವಸೆ ನೀಡಲಾಗಿತ್ತು. ಭಾರತದ ಜನರು ಬಿಜೆಪಿಯ ಮೇಲೆ ಸಂಪೂರ್ಣ ವಿಶ್ವಾಸವಿರಿಸಿ ಅದನ್ನು ಬಹುಮತದಿಂದ ಆರಿಸಿದರು. ಈ ಅವಧಿಯಲ್ಲಿ ಸರಕಾರ ತನ್ನ ಆ ಆಶ್ವಾಸನೆ ಈಡೇರಿಸುವುದೆಂದು ಭಾರತದ ಜನರು ನಿರೀಕ್ಷಿಸುತ್ತಾರೆ’’ ಎಂದು ಆರೆಸ್ಸೆಸ್ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News