ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಪ್ರತಿಕ್ರಿಯಿಸಿದ ಯಡಿಯೂರಪ್ಪ
ಬೆಂಗಳೂರು, ಜ.2: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಜಂಜಾಟದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆಪರೇಷನ್ ಕಮಲ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬುಧವಾರ ನಗರದ ಡಾಲರ್ಸ್ ಕಾಲನಿಯಲ್ಲಿರುವ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದು ವಾರ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಹಾಗಂತ ನಾವೇನೋ ಗೊಂದಲ ಸೃಷ್ಟಿಸಲು ಅಥವಾ ಸರಕಾರ ಬೀಳಿಸಲು ಹೊರಟಿದ್ದೇವೆ ಅಂತಲ್ಲ ಎಂದರು.
ಸುತ್ತೂರು ಮಠದ ಕಾರ್ಯಕ್ರಮದ ಅಂಗವಾಗಿ ಇನ್ನೊಂದು ವಾರ ಶಿವಮೊಗ್ಗದಲ್ಲೆ ಇರುತ್ತೇನೆ. 104 ಜನ ಶಾಸಕರು ಇರುವ ನಾವು ವಿರೋಧ ಪಕ್ಷವಾಗಿ ಸರಕಾರದ ಲೋಪದೋಷಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡುತ್ತಿದ್ದೇವೆ. ಬಹುಮತ ಇರುವವರೆಗೆ ಅವರ ಸರಕಾರ, ರಾಜ್ಯದ ಅಭಿವೃದ್ಧಿ ಮಾಡಲಿ. ರಾಜ್ಯದ ನೂರಾರು ತಾಲೂಕುಗಳು ಬರಪೀಡಿತವಾಗಿದ್ದು, ಸರಕಾರ ಬರಗಾಲಕ್ಕೆ ಸ್ಪಂದಿಸಿ ಕೆಲಸ ಮಾಡಲಿ ಎಂದು ಯಡಿಯೂರಪ್ಪ ಹೇಳಿದರು.
ಶಬರಿಮಲೆ ದೇಗುಲಕ್ಕೆ ಪೊಲೀಸರ ರಕ್ಷಣೆಯಲ್ಲಿ ಮಹಿಳೆಯರು ಪ್ರವೇಶಿಸಿದ್ದಾರೆ. ಆ ಮೂಲಕ ಶಬರಿಮಲೆ ಸಂಪ್ರದಾಯವನ್ನು ಸರಕಾರವೇ ಮುರಿದಿದೆ. ತನ್ನ ಧೋರಣೆಯಿಂದಾಗಿ ಸರಕಾರ ಜನರನ್ನು ರೊಚ್ಚಿಗೆಬ್ಬಿಸುತ್ತಿದೆ. ಕೇರಳದ ಬಿಜೆಪಿ ಘಟಕ ಈ ಬಗ್ಗೆ ಹೋರಾಟ ಮಾಡುತ್ತಿದ್ದು, ಬಂದ್‌ಗೆ ಕರೆ ನೀಡಿದೆ ಎಂದು ಅವರು ತಿಳಿಸಿದರು.