ದಲಿತರು-ಮುಸ್ಲಿಮರು ರಾಜಕೀಯವಾಗಿ ಒಂದಾಗಬೇಕು: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ
ಬೆಂಗಳೂರು, ಜ.2: ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇಂದಿಗೂ ದಲಿತರು ಹಾಗೂ ಮುಸ್ಲಿಮರನ್ನು ಅವರ ಜಾತಿ, ಧರ್ಮದ ಆಧಾರದ ಮೇಲೆ ಶೋಷಣೆ ಮಾಡಲಾಗುತ್ತಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಎಸ್‌ಡಿಪಿಐ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪರಿವರ್ತನವಾದ) ವತಿಯಿಂದ ಆಯೋಜಿಸಲಾಗಿದ್ದ 201ನೇ ವೀರಯೋಧರ ಭೀಮಕೋರೆಗಾಂವ್ ವಿಜಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಕ್ಕುಗಳನ್ನು ಪಡೆಯಬೇಕಾದರೆ ನಾವು ರಾಜಕೀಯವಾಗಿ ಬೆಳೆಯಬೇಕಾಗಿದೆ. ದನಗಳ ಹೆಸರಿನಲ್ಲಿ ಮನುವಾದಿಗಳು ದಲಿತರು ಹಾಗೂ ಮುಸ್ಲಿಮರನ್ನು ಕೊಲ್ಲುತ್ತಿದ್ದಾರೆ. ನಾವು ಒಗ್ಗೂಡಿ ರಾಜಕೀಯವಾಗಿ ಬೆಳೆಯಬೇಕಿದೆ ಎಂದು ಅವರು ಹೇಳಿದರು.
ಹೋರಾಟಗಳಿಂದ ಮಾತ್ರ ನಾವು ನಮ್ಮ ಹಕ್ಕುಗಳನ್ನು ಪಡೆಯಬಹುದು. ಅದರಲ್ಲಿ ಮುಸ್ಲಿಮರು ಮತ್ತು ದಲಿತರ ರಾಜಕೀಯ ಹೋರಾಟ ಬಹುಮುಖ್ಯವಾಗಿದೆ. ದಲಿತರ ಮೇಲೆ ಆಗುತ್ತಿದ್ದ ದೌರ್ಜನ್ಯಗಳು ಹಾಗೂ ಅದರಲ್ಲಿನ ಹೋರಾಟದ ಪ್ರಾಮುಖ್ಯತೆಯನ್ನು ಇಲ್ಯಾಸ್ ತುಂಬೆ ಇದೇ ಸಂದರ್ಭದಲ್ಲಿ ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ರ್ಯಾಲಿ ನಡೆಸಲಾಯಿತು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಅಲ್ಲದೆ, ಬಡವರಿಗೆ ಕಂಬಳಿ ಹಾಗೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ಜಿಲ್ಲಾ ಉಪಾಧ್ಯಕ್ಷ ಗಂಗಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ) ಸಂಘಟನಯ ಎಂ.ಆರ್.ವೆಂಕಟೇಶ್, ಬಿ.ಎಂ.ವೆಂಕಟೇಶ್, ಕಾನೂನು ಸಲಹೆಗಾರ ವಿಜಿಯನ್, ಆಸಿಫ್ ಅಕ್ರಂ, ಸಯ್ಯದ್ ಅಯಾಝ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.