ಹಳೆಯ ವಾಹನಗಳಿಗೂ ಜಿಪಿಎಸ್ ವ್ಯವಸ್ಥೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

Update: 2019-01-02 16:03 GMT

ಬೆಂಗಳೂರು, ಜ. 2: ಜಿಪಿಎಸ್ ಹಾಗೂ ತುರ್ತು ಗಾಬರಿ ಗುಂಡಿ ಅಳವಡಿಕೆ ವ್ಯವಸ್ಥೆಯನ್ನು ಮುಂಬರುವ ದಿನಗಳಲ್ಲಿ ಹಳೆಯ ವಾಹನಗಳಿಗೂ ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ಯಶವಂತಪುರ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ಸಾರ್ವಜನಿಕ ಪ್ರಯಾಣಿಕ ವಾಹನಗಳಲ್ಲಿ ಜಿಪಿಎಸ್ ಹಾಗೂ ತುರ್ತು ಗಾಬರಿ ಗುಂಡಿ ಅಳವಡಿಕೆ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಮಿತಿಮೀರಿದ ಭಾರ ಹಾಕಿಕೊಂಡು ಸಂಚರಿಸುವ ಲಾರಿಗಳ ಮೇಲೆ ನಿಗಾವಹಿಸಲು ಇಂಥದ್ದೇ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲ ಆಗಲಿದೆ ಎಂದು ಹೇಳಿದರು.

ಜಿಪಿಎಸ್ ವ್ಯವಸ್ಥೆ ನಿಯಂತ್ರಣ ಕೇಂದ್ರ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗಳಲ್ಲಿ ಇರಲಿದೆ. ಮುಂದೆ ಇದನ್ನು ಸಂಚಾರ ಪೊಲೀಸ್ ಠಾಣೆಗಳ ಜೊತೆಗೆ ಸಂಪರ್ಕ ಕಲ್ಪಿಸಲಾಗುವುದು. ವಾಹನ ತೊಂದರೆಗೆ ಒಳಗಾದಾಗ ಪ್ಯಾನಿಕ್ ಬಟನ್ ಒತ್ತಿದಾಗ ಸಮೀಪದ ಪೊಲೀಸ್ ಠಾಣೆಗೂ ಮಾಹಿತಿ ರವಾನೆಯಾಗಲಿದೆ ಎಂದು ತಮ್ಮಣ್ಣ ಮಾಹಿತಿ ನೀಡಿದರು.

ಈ ಸಾಧನಗಳನ್ನು ದೇಶದ 25 ಕಂಪೆನಿಗಳು ಉತ್ಪಾದಿಸುತ್ತಿವೆ. ಸಾರಿಗೆ ಇಲಾಖೆಯಿಂದ ಇವೆಲ್ಲವೂ ಪ್ರಮಾಣೀಕರಣಗೊಂಡಿವೆ. ಯಾವುದೇ ಕಂಪೆನಿಗಳ ಸಾಧನಗಳನ್ನು ವಾಹನ ಮಾಲಕರು ಅಳವಡಿಸಿಕೊಳ್ಳಬಹುದು. ಬೆಲೆ 10 ಸಾವಿರದಿಂದ 12 ಸಾವಿರ ರೂ.ಇರಲಿದೆ. ವಾಹನ ಮಾಲಕರಿಗೆ ಹೊರೆಯಾಗದ ರೀತಿಯಲ್ಲಿ ಇದರ ಬೆಲೆ ಪರಿಷ್ಕರಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News