ಆಟೋ ಚಾಲಕರಿಗೆ ಸಾಲ ಸೌಲಭ್ಯ ಒದಗಿಸಲು ಕೋರಿ ಅರ್ಜಿ: ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕಲ್ಪಿಸಿದ ಹೈಕೋರ್ಟ್
ಬೆಂಗಳೂರು, ಜ.2: ನಗರದ ಆಟೋ ರಿಕ್ಷಾ ಚಾಲಕರಿಗೆ ಬಿಡಿಎ ನಿವೇಶನ ಹಂಚಿಕೆ, ಯಶಸ್ವಿನಿ ಯೋಜನೆ ಜಾರಿ, ಬಿಪಿಎಲ್ ಕಾರ್ಡ್ ವಿತರಣೆ ಹಾಗೂ ಸಾಲ ಸೌಲಭ್ಯ ಒದಗಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರಕಾರ ಕಾಲಾವಕಾಶ ಕೇಳಿದೆ.
ಬೆಂಗಳೂರು ಆಟೋ ಚಾಲಕರ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್ ಹಾಗೂ ಸೋಮಶೇಖರ್ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾ. ಅರವಿಂದ ಕುಮಾರ್ ನೇತೃತ್ವದ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಈ ವೇಳೆ ಸರಕಾರದ ಪರ ವಕೀಲರು ವಾದ ಮಂಡಿಸಿ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಈ ಮನವಿಯನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು. ಇದಕ್ಕೂ ಮೊದಲು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸಾರ್ವಜನಿಕ ಸೇವೆಯಲ್ಲಿ ಆಟೋ ಚಾಲಕರು ಪಾತ್ರ ಬಹಳ ಮುಖ್ಯವಾಗಿದೆ. ಹಗಲಿರುಳು ಕಷ್ಟ ಪಟ್ಟು ದುಡಿದರೂ, ಅವರ ಆದಾಯ ಆಷ್ಟಕ್ಕಷ್ಟೇ. ಇದರಿಂದಾಗಿ ಆಟೋ ಚಾಲಕರ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ, ನಗರದ ಆಟೋ ಚಾಲಕರಿಗೆ ನಿವೇಶನ, ಬಿಪಿಎಲ್ ಕಾರ್ಡ್, ಆರೋಗ್ಯ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಆಟೋ ಚಾಲಕರಿಗೆ ಬಿಡಿಎ ವತಿಯಿಂದ ನಿವೇಶನ ಹಂಚಿಕೆ, ಯಶಸ್ವಿನಿ ಯೋಜನೆ ಜಾರಿ, ಬಿಪಿಎಲ್ ಕಾರ್ಡ್ ವಿತರಣೆ ಹಾಗೂ 2 ಸ್ಟ್ರೋಕ್ ಹೊಂದಿರುವ ಆಟೋ ಚಾಲಕರು 4 ಸ್ಟ್ರೋಕ್ ಆಟೋ ಖರೀದಿಸಲು ರಾಷ್ಟ್ರೀಕೃತ ಬ್ಯಾಂಕುಗಳಿಂದ 30 ಸಾವಿರ ರೂ. ಸಾಲ ಸೌಲಭ್ಯ ಒದಗಿಸುವ ಸಂಬಂಧ 2016ರ ಜೂ.1ರಂದು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡಾವಳಿಗಳಿಗೆ (ನಿರ್ಣಯ) ತಾರ್ಕಿಕ ಅಂತ್ಯ ಕಾಣಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.