ಜ.5ಕ್ಕೆ 13 ಗ್ರಂಥಗಳ ಲೋಕಾರ್ಪಣೆ: ಮಾಜಿ ಸಚಿವ ಎಚ್.ಎಂ.ರೇವಣ್ಣ

Update: 2019-01-02 16:28 GMT

ಬೆಂಗಳೂರು, ಜ.2: ಕುರುಬ ಸಮಾಜದ ಸಮಸ್ತ ಇತಿಹಾಸ, ಧರ್ಮ, ಕಲೆ ಹಾಗೂ ಸಂಸ್ಕೃತಿಯ ಮಾಹಿತಿಯನ್ನೊಳಗೊಂಡ 13 ಕುರುಬರ ಸಾಂಸ್ಕೃತಿಕ ಮಾಲಿಕೆಯ 13 ಗ್ರಂಥಗಳ ಲೋಕಾರ್ಪಣಾ ಸಮಾರಂಭ ಜ.5ಕ್ಕೆ ಜರುಗಲಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.

ಬುಧವಾರ ನಗರದ ರಾಜಭವನ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5 ಗಂಟೆಗೆ ಸಮಾರಂಭ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕುರುಬರ ಸಂಸ್ಕೃತಿಯ ಮಾಹಿತಿಯನ್ನು ತಿಳಿಸುವ ಗ್ರಂಥಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

ಈಶ್ವರಾನಂದಪುರಿ ಸ್ವಾಮೀಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಲಿದ್ದು, ಸಚಿವರಾದ ಬಂಡೆಪ್ಪ ಕಾಶೆಂಪೂರ್, ಸಿ.ಎಸ್.ಶಿವಳ್ಳಿ, ಎಂ.ಟಿ.ಬಿ ನಾಗರಾಜ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಶಾಸಕರಾದ ಕೆ.ಎಸ್.ಈಶ್ವರಪ್ಪ, ಆರ್.ಶಂಕರ್ ಹಾಗೂ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕುರುಬರ ಸಂಸ್ಕೃತಿ ದರ್ಶನ ಎಂಬ ಯೋಜನೆಯಡಿ ಬೃಹತ್ ಮಾಲಿಕೆಯ ಸಂಪುಟಗಳನ್ನು ಹೊರತರಲಾಗುತ್ತಿದ್ದು, ಮೊದಲ ಹಂತದಲ್ಲಿ 10 ಸಂಪುಟಗಳ 13 ಗ್ರಂಥಗಳು ಬಿಡುಗಡೆಯಾಗಲಿವೆ. ಸಂಸ್ಕೃತಿ, ಶಿಕ್ಷಣ, ರಾಜಕೀಯ ಕುರಿತ ಗ್ರಂಥಗಳು 2ನೇ ಹಂತದಲ್ಲಿ ಬಿಡುಗಡೆಯಾಗಲಿವೆ ಎಂದು ಹೇಳಿದರು.

ಸಮಾರಂಭದಲ್ಲಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಬರೆದ ಪುರಾಣ, ಲಿಂಗದಹಳ್ಳಿ ಹಾಲಪ್ಪಅವರ-ಇತಿಹಾಸ (ಭಾಗ 1, 2), ಧರ್ಮ(ಭಾಗ-1, 2, 3), ಬೀದರಿ ಚಂದ್ರಕಲಾರವರ-ಸಾಹಿತ್ಯ, ಚಂದ್ರಕಾಂತ- ಬಿಜ್ಜರಗಿ ಮತ್ತು ಚಿಕ್ಕಣ್ಣ ಎಣ್ಣೆಕಟ್ಟೆರವರ ಕಲೆ ಮತ್ತು ಕ್ರೀಡೆ, ಆರ್.ಸುದನಮ್ಮ ಮಹಿಳೆ, ಒಡೆಯರ್ ಡಿ. ಹೆಗ್ಡೆರವರು ಸಾಮಾಜೋ-ಆರ್ಥಿಕ, ಡಾ.ಬಿ.ಕೆ.ರವಿ ಅವರ- ಆಧುನಿಕತೆ, ಕಾ.ತ. ಚಿಕ್ಕಣ್ಣರವರ ಚಿತ್ರಕೋಶ, ಲಿಂಗದಹಳ್ಳಿ ಹಾಲಪ್ಪಅವರ ಸಾಂಸ್ಕೃತಿಕ ಪದಕೋಶ ಗ್ರಂಥಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

13 ಗ್ರಂಥಗಳ ಒಟ್ಟು ಬೆಲೆ 4,640ರೂ.ಗಳಾಗಿದ್ದು, ಇಡೀ ಸಂಪುಟಗಳನ್ನು ಮೊದಲೇ ಮುಂಗಡವಾಗಿ ಕಾಯ್ದುರಿಸುವವರು ಹಾಗೂ ಗ್ರಂಥಗಳ ಬಿಡುಗಡೆ ದಿನ ಖರೀದಿಸುವವರೆಗೆ ರಿಯಾಯಿತಿ ಬೆಲೆ 3,500 ರೂ.ಗಳಿಗೆ ಲಭ್ಯವಾಗಲಿದೆ ಎಂದು ರೇವಣ್ಣ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News