ಯುವತಿಯರ ಸಬಲೀಕರಣಕ್ಕೆ ‘ಪ್ರಿಯದರ್ಶಿನಿ’ ವೇದಿಕೆ: ಉ.ಪ್ರ. ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್

Update: 2019-01-04 16:58 GMT

ಬೆಂಗಳೂರು, ಜ.4: ಯುವತಿಯರನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಬಲೀಕರಣಗೊಳಿಸಲು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಮಿತಿಯ ಅಧೀನದಲ್ಲಿ ಆರಂಭಿಸಿರುವ ‘ಪ್ರಿಯದರ್ಶಿನಿ’ ಉತ್ತಮ ವೇದಿಕೆಯಾಗಲಿದೆ ಎಂದು ಉತ್ತರಪ್ರದೇಶದ ಶಾಸಕಿ ಹಾಗೂ ಯೋಜನೆಯ ರಾಷ್ಟ್ರೀಯ ಉಸ್ತುವಾರಿ ಅದಿತಿ ಸಿಂಗ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಿಯದರ್ಶಿನಿ ಯೋಜನೆ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ದನಿ ಎತ್ತಲು ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ ರಾಜಕೀಯವಾಗಿ 16 ರಿಂದ 35 ವಯೋಮಾನದ ಯುವತಿಯರು, ಮಹಿಳೆಯರು ಸಕ್ರಿಯವಾಗಲು ಇದು ಸಹಕಾರಿಯಾಗಲಿದೆ ಎಂದರು.

ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಮಹಿಳೆಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶಾಲೆ, ಕಾಲೇಜು ವಿದ್ಯಾರ್ಥಿನಿಯರು, ವೃತ್ತಿಪರ ಮಹಿಳೆಯರು ರಾಷ್ಟ್ರನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಈ ಯೋಜನೆ ಉತ್ತಮ ವೇದಿಕೆಯಾಗಿದೆ ಎಂದು ಅವರು ಹೇಳಿದರು.

ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗಾಗಿ ಯುವತಿಯರು, ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಪ್ರಸ್ತುತ ರಾಜಕಾರಣದಲ್ಲಿ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಹೀಗಾಗಿ ಸತ್ಯವನ್ನ ಪ್ರಸ್ತುತಪಡಿಸುವ ಅನಿವಾರ್ಯತೆಯಿದೆ ಎಂದು ಅದಿತಿ ಸಿಂಗ್ ತಿಳಿಸಿದರು. ಪಕ್ಷದತ್ತ ಯುವ ಜನತೆಯನ್ನು ಸೆಳೆಯುವ ಅವಶ್ಯಕತೆಯಿದೆ. ಅವರಲ್ಲಿ ನಿಜವಾದ ಪ್ರಜಾಪ್ರಭುತ್ವದ ಅರಿವು ಮೂಡಿಸಬೇಕಿದೆ. ಅದರಲ್ಲೂ ಯುವತಿಯರು, ಮಹಿಳೆಯರಲ್ಲೂ ಜಾಗೃತಿ ಅವಶ್ಯಕವಾಗಿದೆ ಎಂದು ಅವರು ಹೇಳಿದರು.

ಮಹಿಳೆಯರ ಸಬಲೀಕರಣ ನಮ್ಮ ಆದ್ಯತೆ. ಕೇಂದ್ರ ಸರಕಾರವು ಮಹಿಳೆಯರ ಬಗ್ಗೆ ನಡೆದುಕೊಳ್ಳುವ ರೀತಿಯ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಮಹಿಳೆಯರು ಯಾವ ರೀತಿ ಬಟ್ಟೆ ತೊಡಬೇಕು, ಏನು ಅಧ್ಯಯನ ಮಾಡಬೇಕು ಎಂದು ಹೇಳಲು ನೀವು ಯಾರು ಎಂದು ಕೇಂದ್ರ ಸರಕಾರ ವಿರುದ್ಧ ಅವರು ಹರಿಹಾಯ್ದರು.

ಕೇಂದ್ರ ಸರಕಾರದಿಂದ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳ ವಿರುದ್ಧ ದನಿ ಎತ್ತಲು ಮಹಿಳೆಯರಿಗೆ ತರಬೇತಿ ನೀಡಲಾಗುವುದು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಹಿಳೆಯರಿಗೆ ಒಳ್ಳೆಯ ವೇದಿಕೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಕೇವಲ ನಮ್ಮ ದೇಶ ಅಷ್ಟೇ ಅಲ್ಲ, ವಿದೇಶದಲ್ಲಿಯೂ ಖ್ಯಾತಿಗಳಿಸಿದ್ದರು. ಅವರ ಹೆಸರಿನಲ್ಲೆ ಈ ವೇದಿಕೆ ಆರಂಭಿಸಲಾಗಿದೆ ಎಂದು ಅದಿತಿ ಸಿಂಗ್ ಹೇಳಿದರು.

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್ ಮಾತನಾಡಿ, ಇಂದಿರಾಗಾಂಧಿ ಕೇವಲ ವ್ಯಕ್ತಿಯಾಗಿರಲಿಲ್ಲ. ಅವರು ಒಂದು ಶಕ್ತಿಯಾಗಿದ್ದರು. ದೇಶದ ಮಹಿಳೆಯರಿಗೆ ಅವರು ಆದರ್ಶಪ್ರಾಯ. ಅವರ ಹೆಸರಿನಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಪಕ್ಷದಲ್ಲಿ ಸ್ಥಾಪಿಸುತ್ತಿರುವ ಪ್ರಿಯದರ್ಶಿನಿ ವೇದಿಕೆ ಸ್ವಾಗತಾರ್ಹ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಾನೆಟ್ ಡಿ’ಸೋಜಾ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಇ.ರಾಧಾಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News