ಮಹಾತ್ಮ ಗಾಂಧಿಯನ್ನು ನೆನೆಯುವ ಕಾರ್ಯಕ್ರಮಗಳು ನಡೆಯಬೇಕು: ಎಸ್.ಎಂ.ಕೃಷ್ಣ

Update: 2019-01-05 13:34 GMT

ಬೆಂಗಳೂರು, ಜ.5: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ನೆನಯುವ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದರು.

ಶನಿವಾರ ನಗರದ ಕುಮಾರಕೃಪಾದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿದ್ದ ಗಾಂಧಿ-150, ಕಲಾ ಪ್ರದರ್ಶನ ಮತ್ತು ಚಿತ್ರಕಲಾ ಸನ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿರುವ ಚಿತ್ರಸಂತೆ ರವಿವಾರ(ಜ.6) ಜರುಗಲಿದೆ. ಈ ಸಂತೆಯಲ್ಲಿ ಗಾಂಧಿ ಕಲಾಭಿಮಾನ ಅನಾವರಣಗೊಳ್ಳಲಿದೆ ಎಂದು ತಿಳಿಸಿದರು.

ಬಾಲ್ಯದಲ್ಲೇ ಮಹಾತ್ಮ ಗಾಂಧಿ ಅವರನ್ನು ನೋಡುವ ವಿಶೇಷ ಭಾಗ್ಯ ದೊರೆಯಿತು. ಒಮ್ಮೆ 1935ರಲ್ಲಿ ಅವರು ತಮ್ಮ ಊರಿನ, ಸಾರ್ವಜನಿಕ ಶಾಲೆಗೆ ಭೇಟಿ ನೀಡಿದ್ದರು. ಅಲ್ಲಿ ಶಿಕ್ಷಣ ಪಡೆಯುತ್ತಿದ್ದ, ದಲಿತ ವಿದ್ಯಾರ್ಥಿಗಳಿಬ್ಬರನ್ನು ಗುರುತಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಅವರು ನೆನದರು. 1946ರಲ್ಲಿ ದೆಹಲಿಯಲ್ಲಿ ಮಹಾತ್ಮ ಗಾಂಧಿ ಅವರ ಉಪದೇಶ ಕೇಳಿದ್ದೇನೆ ಎಂದ ಅವರು, ಗಾಂಧಿ ಅವರು ಕಲಾಭಿಮಾನಿ. ಹೀಗಾಗಿ, ಚಿತ್ರಕಲೆಯು ಪ್ರಪಂಚದಾದ್ಯಂತ ಬೆಳೆಯಬೇಕು. ಜೊತೆಗೆ, ಪ್ರಶಸ್ತಿ ಪುರಸ್ಕೃತರು ಚಿತ್ರಕಲೆಗೆ ವಿಶೇಷ ಕೊಡುಗೆ ನೀಡಿದ್ದಾರೆಂದು ಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ನಟ ರಮೇಶ್ ಅರವಿಂದ್ ಮಾತನಾಡಿ, ಮಹಾತ್ಮ ಗಾಂಧಿಯವರ ವಿಚಾರಧಾರೆ ಇಂದಿನ ಯುವ ಪೀಳಿಗೆಗೆ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹೊಸ ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮಗಳನ್ನು ಬಳಸಿಕೊಂಡು, ಆಧುನಿಕವಾಗಿ ಅವರ ವಿಚಾರಗಳನ್ನು ತಲುಪಿಸಬೇಕು ಎಂದು ಸಲಹೆ ಮಾಡಿದರು.

ನೊಬೆಲ್ ಪ್ರಶಸ್ತಿ: ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಮಾತನಾಡಿ, ಮಹಾತ್ಮ ಗಾಂಧಿ ಅವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕಿತ್ತು. ಆದರೆ, ಯಾವುದೋ ಕಾರಣಗಳಿಗೆ ತಪ್ಪಿಹೋಗಿದೆ. ಗಾಂಧಿ ಅವರು ಮರಣ ಹೊಂದಿದ ದಿನದಂದು, ವಿಶ್ವಸಂಸ್ಥೆ ಸೇರಿದಂತೆ ಅನೇಕ ರಾಷ್ಟ್ರಗಳು ಭಾವನಾತ್ಮಕವಾಗಿ ಅವರಿಗೆ ಗೌರವ ನೀಡಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಸ್ತುತ ಸಾಲಿನ ಎಚ್.ಕೆ.ಕೇಜರಿವಾಲ್ ಪ್ರಶಸ್ತಿ-ಹಿರಿಯ ಚಿತ್ರಕಲಾವಿದ ಜೆ.ಎಂ.ಎಸ್.ಮಣಿ, ಡಿ.ದೇವರಾಜ ಅರಸು ಪ್ರಶಸ್ತಿ-ಜೆಸು ರಾವಲ್ ಹಾಗೂ ಎಂ.ಆರ್ಯ ಮೂರ್ತಿ ಪ್ರಶಸ್ತಿ ಅನ್ನು ನೀಲಾ ಪಂಚ್ ಅವರಿಗೆ ಪ್ರದಾನ ಮಾಡಲಾಯಿತು. ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷ ಹರೀಶ್ ಜೆ.ಪದ್ಮನಾಭ, ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಜೆ.ಕಮಲಾಕ್ಷಿ ಸೇರಿದಂತೆ ಪ್ರಮುಖರಿದ್ದರು.

ಐಟಿ ದಾಳಿಯ ನೇತೃತ್ವ ವಹಿಸಿದ್ದೆ

ಕನ್ನಡ ಚಿತ್ರರಂಗದ ನಟ-ನಿರ್ಮಾಪಕರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಹಲವು ವರ್ಷಗಳ ಹಿಂದೆ ನಾನು ಆರ್ಥಿಕ ಇಲಾಖೆಯ ಸಹಾಯಕ ಸಚಿವನಾಗಿದ್ದೆ. ಆ ಸಂದರ್ಭದಲ್ಲಿ ಇಂತಹ ದಾಳಿಗಳ ನೇತೃತ್ವ ವಹಿಸಿದ್ದೆ ಎಂದು ನೆನದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News