×
Ad

ಸಮ್ಮಿಶ್ರ ಸರಕಾರಕ್ಕೆ ಯಾವುದೇ ಧಕ್ಕೆ ಇಲ್ಲ: ಎಚ್.ಡಿ.ದೇವೇಗೌಡ

Update: 2019-01-05 19:10 IST

ಬೆಂಗಳೂರು, ಜ.5: ನಿಗಮ ಮಂಡಳಿ ಹಂಚಿಕೆ ವಿಚಾರದಲ್ಲಿ ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಲಾಗುವುದು. ಈ ಸಮಸ್ಯೆಗಳಿಂದ ಸಮ್ಮಿಶ್ರ ಸರಕಾರಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಶನಿವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಜೆಡಿಎಸ್‌ಗೆ ಎರಡ್ಮೂರು ನಿಗಮ ಮಂಡಳಿಗಳನ್ನು ಹೆಚ್ಚಿಗೆ ಬಿಟ್ಟು ಕೊಡುತ್ತೇವೆ ಎಂದು ಈಗಾಗಲೇ ಹೇಳಿದ್ದು, ಈ ಸಮಸ್ಯೆಯೂ ಶೀಘ್ರವೇ ಬಗೆಹರಿಯುತ್ತದೆ. ಇಂತಹ ಸಣ್ಣ ಪುಟ್ಟ ಸಮಸ್ಯೆಗಳಿಂದ ಸರಕಾರಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ಉಭಯ ಪಕ್ಷಗಳ ನಾಯಕರು ಸರಕಾರದಲ್ಲಿನ ಏರುಪೇರುಗಳನ್ನು ಸರಿಪಡಿಸಲಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ತಾವು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಸಮಾಲೋಚನೆ ಮಾಡುತ್ತೇವೆ ಎಂದರು.

ತಾವು ಅಧಿಕಾರದಲ್ಲಿದ್ದಾಗ ಬೆಂಗಳೂರು ಹಾಗೂ ರಾಜ್ಯಕ್ಕೆ ಮಾಡಿರುವ ಕೊಡುಗೆಗಳನ್ನು ಜನರ ಬಳಿಗೆ ಕೊಂಡೊಯ್ದು ಮನವರಿಕೆ ಮಾಡಿಕೊಡಲಾಗುವುದು. ಪಕ್ಷದಲ್ಲಿ ಎಲ್ಲರೂ ಸಮಾಲೋಚನೆ ನಡೆಸಿ ಒಮ್ಮತಕ್ಕೆ ಬಂದು ಪಕ್ಷದ ವಿವಿಧ ಘಟಕಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 37 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದ್ದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಾಗುವುದು. ಶಾಸಕರನ್ನು ಒಳಗೊಂಡಂತೆ ಇನ್ನು ಎರಡು ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ತಯಾರಿ ನಡೆಸುವುದರ ಜೊತೆಗೆ ಪಕ್ಷದ ಸಂಘಟನೆಗೂ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಜೆಡಿಎಸ್ ಪಕ್ಷ ಪ್ರಾದೇಶಿಕ ಪಕ್ಷವಾಗಿದ್ದು, ಹಲವು ಬಾರಿ ಹೆಚ್ಚಿನ ಶಾಸಕರು ಹಾಗೂ ಸಂಸದರು ಗೆಲ್ಲುವ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಈ ಸಂಗತಿಯನ್ನು ನಮ್ಮ ಸ್ನೇಹಿತರು ಅರ್ಥ ಮಾಡಿಕೊಳ್ಳಬೇಕು. ಇದೇ ಮಂಗಳವಾರ ನಮ್ಮ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರ ಸಭೆ ಕರೆಯಲಾಗುತ್ತಿದ್ದು, ಈ ಸಭೆಯಲ್ಲಿ ಬರುವ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಲಾಗುವುದು. ಹಾಗೂ ಪಕ್ಷ ಸಂಘಟನೆ, ತಾವು ಪ್ರಧಾನಿ ಆಗಿದ್ದಾಗ ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಕೈಗೊಂಡ ಅಭಿವೃದ್ಧಿಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು ಮತ ಹಾಕುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತರಲು ನಾನೇ ಕಾನೂನು ತಿದ್ದುಪಡಿ ತಂದಿದ್ದೆ. ಆದರೆ, ಬಿಜೆಪಿಯೇ ಮೀಸಲಾತಿಯನ್ನ ತಡೆಹಿಡಿದಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ನಾನು ಹೋರಾಟ ಮಾಡಿದ್ದೇನೆ. ಅಲ್ಲದೆ, ಪ್ರಾದೇಶಿಕ ಪಕ್ಷಕ್ಕೆ ಶಕ್ತಿ ತುಂಬಲು ತುಂಬಾ ಕಷ್ಟ ಪಡುತ್ತಿದ್ದೇವೆ. ವೈ.ಎಸ್.ವಿ.ದತ್ತ ಅವರಿಗೆ ಪಕ್ಷದ ಜವಾಬ್ದಾರಿ ಕೊಟ್ಟಿದ್ದೇವೆ ಎಂದು ಹೇಳಿದರು.

ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಮಾತನಾಡಿ, ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕುಠಾರಸ್ವಾಮಿ ಆಗದೇ ಕನ್ನಡದ ಅಳಿವು ಮತ್ತು ನಮ್ಮ ಜನಭಾಷೆಯ ಅಸ್ಮಿತೆಯ ರಕ್ಷಣೆಗೆ ನಿಲ್ಲಬೇಕೆಂದು ಹೇಳಿದ್ದಾರೆ. ಆದರೆ, ಎಚ್‌ಡಿಕೆ ಅವರು ಈಗಾಗಲೇ ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಅವರು ಕುಠಾರಸ್ವಾಮಿಗಳು ಆಗದೇ ಕನ್ನಡ ಉಳಿಸುವ ಕಠೋರ ಸ್ವಾಮಿಗಳಾಗುತ್ತಾರೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News