ಪೊಲೀಸರ ತನಿಖೆಯಿಂದ ಸತ್ಯಾಂಶ ಬಯಲು: ದಿನೇಶ್‌ ಗುಂಡೂರಾವ್

Update: 2019-01-05 13:43 GMT

ಬೆಂಗಳೂರು, ಜ.5: ವಿಧಾನಸೌಧದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿ ಬಳಿ 25.76 ಲಕ್ಷ ರೂ.ಪತ್ತೆಯಾದ ವಿಚಾರದ ಕುರಿತು, ಈಗಲೇ ಯಾರ ಮೇಲೂ ಆರೋಪ ಮಾಡುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಹಣ ಯಾರದ್ದು ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಲಿದೆ. ಈ ಸಂಬಂಧ ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು ಎಂದರು. ಕೆಪಿಸಿಸಿ ಕಚೇರಿಯಲ್ಲಿ ಸಾಕಷ್ಟು ಸಿಬ್ಬಂದಿಗಳು ಇದ್ದಾರೆ. ಅವರ ಪೈಕಿ ಯಾರ ಬಳಿಯಾದರೂ ಹಣ ಸಿಕ್ಕರೆ ಅದಕ್ಕೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಕೇಂದ್ರ ಸರಕಾರ 30 ಸಾವಿರ ಕೋಟಿ ರೂ.ಹಗರಣ ನಡೆಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರಮೋದಿ ತನಿಖೆಗೆ ವಹಿಸಿಲ್ಲ ಎಂದು ಅವರು ಹೇಳಿದರು.

ಕೇಂದ್ರದ 30 ಸಾವಿರ ಕೋಟಿ ರೂ.ಹಗರಣದ ಮುಂದೆ ಪುಟಗೋಸಿ 20 ಲಕ್ಷ ರೂ. ಯಾವ ಲೆಕ್ಕಾ ಹೇಳಿ ಎಂದು ಮರು ಪ್ರಶ್ನೆ ಹಾಕಿದ ದಿನೇಶ್‌ ಗುಂಡೂರಾವ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಮತ್ತು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ಆಪ್ತ ಸಹಾಯಕರು ಏನೇನು ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ಆಗ ಯಡಿಯೂರಪ್ಪಹಾಗೂ ಈಶ್ವರಪ್ಪ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ರಾ? ರಫೇಲ್ ಹಗರಣದ ಕುರಿತು ತನಿಖೆ ನಡೆಸಲು ಸಂಸತ್ತಿನ ಜಂಟಿ ಸದನ ಸಮಿತಿ ರಚನೆಗೆ ಮೋದಿ ಒಪ್ಪಿಕೊಳ್ಳುತ್ತಿಲ್ಲ. ಪುಟ್ಟರಂಗ ಶೆಟ್ಟಿ ಈ ಹಂತದಲ್ಲಿ ಯಾಕೆ ರಾಜೀನಾಮೆ ನೀಡಬೇಕು. ನಿನ್ನೆ ವಿಧಾನಸೌಧದಲ್ಲಿ ಹಣ ಪತ್ತೆಯಾಗಿರುವ ಪ್ರಕರಣದ ಬಗ್ಗೆ ಉನ್ನತಮಟ್ಟದ ತನಿಖೆ ನಡೆಯಲಿ. ಸಚಿವರೇ ಆಗಿರಲಿ ಪಕ್ಷದ ಯಾರೇ ಆಗಿರಲಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News