ರಫೇಲ್ ಹಗರಣ ಆರೋಪ: ಮೋದಿ ರಾಜೀನಾಮೆ ನೀಡಿ, ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸಲು ಆಗ್ರಹ

Update: 2019-01-05 14:05 GMT

ಬೆಂಗಳೂರು, ಜ.5: ಯುದ್ಧ ವಿಮಾನ ರಫೇಲ್ ಖರೀದಿ ಹಗರಣ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ಮೂಲಕ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು, ರಫೇಲ್ ಯುದ್ಧ ವಿಮಾನ ಖರೀದಿ ಅವ್ಯವಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಯುದ್ಧ ವಿಮಾನ ಖರೀದಿ ಅತ್ಯಂತ ದೊಡ್ಡ ಹಗರಣ. ನರೇಂದ್ರ ಮೋದಿ ಪ್ರಧಾನಿಯಾಗುವಾಗ ಎಷ್ಟೊಂದು ಸುಳ್ಳುಗಳನ್ನು ಹೇಳಿದ್ದಾರೆ. ಅದನ್ನು ನೆನಪು ಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಟೀಕಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಪಿ.ವಿಶ್ವನಾಥ್, ದೇಶದ ಚೌಕಿದಾರ ನಾನು ಎನ್ನುತ್ತಿದ್ದ ಪ್ರಧಾನಿ ಮೋದಿ ಅವರ ಮೇಲೆಯೇ ರಫೇಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿ ನೇರ ಆರೋಪ ಬಂದಿದೆ. ಪ್ರಧಾನಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜಂಟಿ ಸದನ ಸಮಿತಿಗೆ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಸಮಿತಿ ಲೋಕಸಭಾ ಚುನಾವಣೆಗೂ ಮುನ್ನ ತನಿಖಾ ವರದಿಯನ್ನು ದೇಶದ ಮುಂದಿಡಬೇಕು ಎಂದ ಅವರು, ರಫೇಲ್ ದೊಡ್ಡ ಹಗರಣವಾಗಿದೆ. ಬಂಡವಾಳಶಾಹಿಗಳಿಗೆ ಗುತ್ತಿಗೆ ನೀಡಿ 40 ಸಾವಿರ ಕೋಟಿ ರೂ. ಲೂಟಿ ಮಾಡುವ ಪ್ರಯತ್ನ ನಡೆದಿದೆ. ಹಗರಣದ ಮೂಲಕ ದೇಶದ ಜನತೆಯನ್ನು ವಂಚಿಸಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News