ಶ್ರೀಗಂಧದ ಮರ ಕಳವು ಆರೋಪ: ಇಬ್ಬರ ಬಂಧನ
ಬೆಂಗಳೂರು, ಜ.5: ಕಳವು ಮಾಡಿದ ಶ್ರೀಗಂಧದ ಮರದ ತುಂಡುಗಳನ್ನು ಅಪ್ರಾಮಾಣಿಕವಾಗಿ ಸ್ವೀಕರಿಸುತ್ತಿದ್ದ ಮತ್ತು ಕಳವು ಮಾಡಲು ವಾಹನಗಳನ್ನು ಒದಗಿಸುತ್ತಿದ್ದ ಆರೋಪದಡಿ ಇಬ್ಬರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಕೋಟೆಯ ಕಟ್ಟಿಗೇನಹಳ್ಳಿ ನಿವಾಸಿ ರಿಝಾಜ್(49), ಷೇರ್ ಅಲಿ ಬಾಬಾ(28) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಸೇಂಟ್ ಮಾರ್ಕ್ಸ್ ರಸ್ತೆಯ ಬಿಷಪ್ ಕಾಟನ್ ಶಾಲಾ ಆವರಣದಲ್ಲಿದ್ದ ಶ್ರೀಗಂಧದ ಮರಗಳು ಕಳವು ಆಗಿದ್ದ ಸಂಬಂಧ ದೂರು ದಾಖಲಿಸಿಕೊಂಡಿದ್ದ ಇಲ್ಲಿನ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು, ಇಮ್ದಾದ್‌ವುಲ್ಲಾ, ಮುಜಾಹೀದ್ ಲಕ್ಷ್ಮಣ, ರಂಗನಾಥನ್ ರಾಮಸ್ವಾಮಿ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶುಕ್ರವಾರ ನ್ಯಾಯಾಲಯದಿಂದ ಸೂಕ್ತ ಅನುಮತಿ ಪಡೆದು, ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ಎರಡು ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಕಟ್ಟಿಗೇನಹಳ್ಳಿಯಲ್ಲಿನ ಆರೋಪಿಗಳ ಮನೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ 350 ಗ್ರಾಂ ತೂಕದ ಚಿನ್ನದ ಆಭರಣ, ಸುಮಾರು 9 ಕೆ.ಜಿ. ತೂಕದ ಶ್ರೀಗಂಧದ ಮರದ ಚಕ್ಕೆಗಳನ್ನು ಹಾಗೂ 35 ಲಕ್ಷ ನಗದು ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.