ನಟ-ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಸೂಚನೆ
ಬೆಂಗಳೂರು, ಜ.5: ಕನ್ನಡ ಚಿತ್ರರಂಗದ ನಟ-ನಿರ್ಮಾಪಕರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಶೋಧ ಕಾರ್ಯ ಅಂತ್ಯವಾಗಿದ್ದು, ಕೆಲ ನಟರಿಗೆ ಆಸ್ತಿ ದಾಖಲೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸತತ ಎರಡು ದಿನಗಳ ಕಾಲ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ಸುದೀಪ್, ಯಶ್, ಇವರ ಪತ್ನಿ ರಾಧಿಕಾ ಪಂಡಿತ್, ನಿರ್ಮಾಪರಾದ ರಾಕ್‌ಲೈನ್ ವೆಂಕಟೇಶ್, ವಿಜಯ್ ಕಿರಗಂದೂರು ಅವರ ನಿವಾಸದಲ್ಲಿ ಶೋಧ ನಡೆಸಿದ ಅಧಿಕಾರಿಗಳು, ಕೆಲ ದಾಖಲೆಗಳನ್ನು ಸಂಗ್ರಹಿಸಿದ್ದು, ವಿಚಾರಣೆಗೆ ಹಾಜರಾಗಬೇಕೆಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಟ ಪುನೀತ್ ರಾಜ್‌ಕುಮಾರ್ ನಿವಾಸದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಡ ರಾತ್ರಿಯವರೆಗೆ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದರು. ಸತತ ಎರಡು ದಿನಗಳ ಕಾಲ ನಡೆದ ವಿಚಾರಣೆ ಅಂತ್ಯಗೊಂಡಿದ್ದು, ಅಲ್ಲಿಂದ ಶನಿವಾರ ಅಧಿಕಾರಿಗಳು ನಿರ್ಗಮಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪುನೀತ್ ರಾಜ್‌ಕುಮಾರ್, ಐಟಿ ಅಧಿಕಾರಿಗಳ ದಾಳಿಗೆ ಒಬ್ಬ ನಾಗರಿಕನಾಗಿ ಸ್ಪಂದಿಸುವುದು ನನ್ನ ಕರ್ತವ್ಯ. ಅಧಿಕಾರಿಗಳಿಗೆ ಸೂಕ್ತವಾಗಿ ಶೇ.100ರಷ್ಟು ಸ್ಪಂದಿಸಿದ್ದೇವೆ ಎಂದು ತಿಳಿಸಿದರು.
ವಿಚಾರಣೆಗೆ ಹೋಗುತ್ತೇನೆ: ನಟ ಶಿವರಾಜ್ ಕುಮಾರ್ ಮಾತನಾಡಿ, ಈ ಹಿಂದೊಮ್ಮೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. 1984-85ರಲ್ಲಿ ಚೆನ್ನೈನಲ್ಲಿದ್ದಾಗ ಒಮ್ಮೆ ದಾಳಿ ನಡೆದಿತ್ತು. ನಮ್ಮ ಮನೆ ತುಂಬ ದೊಡ್ಡದಾಗಿದ್ದರಿಂದ ಹುಡುಕಲು ಸಮಯ ಹಿಡಿದಿರಬಹುದು. ಕೆಲ ಕಡತಗಳನ್ನು ತಗೊಂಡು ಹೋಗಿದ್ದಾರೆ. ಮತ್ತೆ ವಿಚಾರಣೆಗೆ ಕರೆದರೆ ಹೋಗುತ್ತೇನೆ ಎಂದರು.
ಯಶ್ ಪ್ರತಿಕ್ರಿಯಿಸಿ, ನನ್ನ ಮನೆಯ ಮೇಲೆ ಮೊದಲ ಬಾರಿ ದಾಳಿ ನಡೆದಿದೆ. ಇದು ಹೊಸ ವಿಚಾರ. ನಮಗೂ ಅರ್ಥ ಮಾಡಿಕೊಳ್ಳುವುದು ಇರುತ್ತೆ, ಅಧಿಕಾರಿಗಳು ಅವರ ಕರ್ತವ್ಯ ನಿರ್ವಹಿಸಿದ್ದಾರೆ. ಕೆಲವು ಊಹಾಪೋಹ ಸುದ್ದಿಗಳನ್ನು ನಂಬಬೇಡಿ ಎಂದು ನುಡಿದರು.
ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿ, ಇತ್ತೀಚಿಗೆ ತೆರೆ ಕಂಡ ಕೆಜಿಎಫ್ ಸಿನಿಮಾ ಒಳ್ಳೆಯ ಯಶಸ್ಸು ತಂದಿತ್ತು. ಈ ಚಿತ್ರ ಬಿಡುಗಡೆಯಾದ ಎರಡನೆ ವಾರವೇ ಐಟಿ ಅಧಿಕಾರಿಗಳು ನನ್ನ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದರು. ಸಿನಿಮಾ ಮತ್ತು ನನ್ನ ವೈಯಕ್ತಿಕ ಆದಾಯಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲನೆ ನಡೆಸಿ, ನಮ್ಮಿಂದ ಕೆಲ ಮಾಹಿತಿಗಳನ್ನು ಪಡೆದುಕೊಂಡರು ಎಂದರು.
ದಾಳಿ ವೇಳೆ, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ. ಇನ್ನೂ, ಬೇರೆ ನಟ ಮತ್ತು ನಿರ್ಮಾಪಕರ ಮೇಲೆ ಯಾವ ಕಾರಣಕ್ಕೆ ದಾಳಿ ಆಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಅಧಿಕಾರಿಗಳ ದಾಳಿ ಅಂತ್ಯವಾಗಿದ್ದು, ವಿಚಾರಣೆಗೆ ಕರೆದಾಗ ಹಾಜರಾಗಬೇಕೆಂದು ಸೂಚಿಸಿದ್ದಾರೆ ಎಂದು ತಿಳಿಸಿದರು.
ಅಧಿಕಾರಿಗಳೊಂದಿಗೆ ರಾಕ್‌ಲೈನ್
ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮನೆ ಮೇಲಿನ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಕ್ತಾಯಗೊಂಡಿದೆ ಎನ್ನಲಾಗಿದ್ದು, ಪರಿಶೀಲನೆ ಬಳಿಕ ಅಧಿಕಾರಿಗಳು ವೆಂಕಟೇಶ್ ಅವರನ್ನು ತಮ್ಮ ಜೊತೆಯೇ ಕರೆದುಕೊಂಡು ಹೋಗಿದ್ದಾರೆ. ಜೊತೆಗೆ ಕಪ್ಪುಬಣ್ಣದ ಸೂಟ್‌ಕೇಸ್‌ನಲ್ಲಿ ಐಟಿ ಅಧಿಕಾರಿಗಳು ದಾಖಲೆಗಳನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.