ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಒತ್ತಾಯ: ಜ.6ರಂದು ರಾಜ್ಯಾದ್ಯಂತ ಬಿಜೆಪಿ ಹೋರಾಟ

Update: 2019-01-05 14:24 GMT

ಬೆಂಗಳೂರು, ಜ.5: ವಿಧಾನಸೌಧದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಆಪ್ತ ಸಿಬ್ಬಂದಿಯ ಬಳಿ 25.76 ಲಕ್ಷ ರೂ.ನಗದು ಪತ್ತೆಯಾದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಚಿವ ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಜ.6ರಂದು ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.

ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ದಂಧೆ ನಡೆಯುವುದನ್ನು ತಡೆಯುವುದಾಗಿ ಅಧಿಕಾರಕ್ಕೆ ಬಂದಕೂಡಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧಾನಸೌಧ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರು. ಅದರಲ್ಲೂ, ಮಾಧ್ಯಮ ಪ್ರತಿನಿಧಿಗಳನ್ನು ಗುರಿಯಾಗಿಸಿ, ಪ್ರವೇಶಕ್ಕೆ ತಡೆ ಹಾಕಲಾಗಿತ್ತು ಎಂದರು. ಆದರೆ, ಈಗ ಸಚಿವರೊಬ್ಬರ ಆಪ್ತ ಸಿಬ್ಬಂದಿಯೇ 25.76 ಲಕ್ಷ ರೂ.ನಗದು ಹಣದೊಂದಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಿಜವಾಗಿಯೂ ದಂಧೆ ಎಲ್ಲಿ ನಡೆಯುತ್ತಿದೆ ಎನ್ನುವುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ ಎಂದು ರವಿಕುಮಾರ್ ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಅವರ ಆಪ್ತ ಸಹಾಯಕನೇ ಲಕ್ಷಾಂತರ ರೂ.ನಗದಿನೊಂದಿಗೆ ವಿಧಾನಸೌಧ ಪೊಲೀಸರಿಗೆ ಸಿಕ್ಕಿಬಿದ್ದಿರುವುದು, ಸಮ್ಮಿಶ್ರ ಸರಕಾರದಲ್ಲಿ ಶಕ್ತಿ ಸೌಧವು ಹೇಗೆ ದುರ್ಬಳಕೆಯಾಗುತ್ತಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಮುಖ್ಯಮಂತ್ರಿ ಈ ಕೂಡಲೇ ಪುಟ್ಟರಂಗ ಶೆಟ್ಟಿಯನ್ನು ಸಂಪುಟದಿಂದ ಕೈಬಿಟ್ಟು, ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News