ಮಹಿಳೆಯರಿಂದ ಮಹಿಳೆಯರಿಗಾಗಿ ಏರ್‌ಪೋರ್ಟ್ ಪಿಂಕ್ ಟ್ಯಾಕ್ಸಿ ಪರಿಚಯ
ಬೆಂಗಳೂರು, ಜ.5: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮಹಿಳಾ ಚಾಲಕಿಯರು ಚಲಾಯಿಸುವ ಏರ್‌ಪೋರ್ಟ್ ಟ್ಯಾಕ್ಸಿಗಳನ್ನು ಪರಿಚಯಿಸುತ್ತಿದ್ದು, ಜ.7ರಂದು ಬೆಳಗ್ಗೆ 9.15ಕ್ಕೆ ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 850 ಏರ್‌ಪೋರ್ಟ್ ಟ್ಯಾಕ್ಸಿಗಳನ್ನು ತನ್ನ ವಾಹನ ದಳಕ್ಕೆ ಸೇರಿಸಿಕೊಳ್ಳಲಿದೆ.
ಕೆಎಸ್‌ಟಿಡಿಸಿ ತನ್ನ ನೇತೃತ್ವದಲ್ಲಿ ಮುಖ್ಯವಾಗಿ ಒಂಟಿ ಮಹಿಳೆಯರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣದ ಭರವಸೆ ನೀಡುತ್ತಿದೆ. ಅಲ್ಲದೆ, ಮಹಿಳಾ ಚಾಲಕಿಯರಿಗೆ ಉದ್ಯೋಗಾವಕಾಶ ಒದಗಿಸುವ ಸದುದ್ದೇಶದಿಂದ ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣದ ನಿಯಮಗಳನ್ನು ಅನುಸರಿಸಿ ಆರಂಭಿಕವಾಗಿ 10 ಮಹಿಳಾ ಚಾಲಕಿಯರಿರುವ ಹೊಸ ಕಾರುಗಳನ್ನು ತನ್ನ ಪಡೆಗೆ ಸೇರ್ಪಡಿಸಿಕೊಳ್ಳಲಿದೆ.
ದಿನ ಪೂರ್ತಿ ಪಿಂಕ್ ಟ್ಯಾಕ್ಸಿ ಲಭ್ಯ: ಮಹಿಳಾ ಚಾಲಕಿಯರು ಉತ್ತಮ ತರಬೇತಿ ಪಡೆದಿದ್ದು, ಸ್ವರಕ್ಷಣಾ ಸಾಮರ್ಥ್ಯ ಹೊಂದಿದ್ದಾರೆ. ಇವರೆಲ್ಲರೂ ಪ್ರಯಾಣಿಕರು ಮಹಿಳೆಯರೇ ಆಗಲಿ, ಒಂಟಿ ಮಹಿಳೆ ಆಗಿರಲಿ ಚಾಕಚಕ್ಯತೆಯೊಂದಿಗೆ ಪ್ರಯಾಣಿಕರನ್ನು ಸುರಕ್ಷತೆಯಿಂದ ಅವರ ಜಾಗಕ್ಕೆ ತಲುಪಿಸಬಲ್ಲವರಾಗಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಪಿಂಕ್ ಟ್ಯಾಕ್ಸಿಯು ಪ್ರತಿ ಕಿ.ಮೀಗೆ 21 ರೂಪಾಯಿ 50 ಪೈಸೆ ಹಾಗೂ ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಪ್ರತಿ ಕಿ.ಮೀಗೆ 23 ರೂಪಾಯಿ 50 ಪೈಸೆಯಂತೆ 24/7 ಕಾರ್ಯನಿರ್ವಹಿಸಲಿದೆ.
ವಾಹನಗಳ ಚಲನವಲನ ನಿಗಾ: ಪಿಂಕ್ ಟ್ಯಾಕ್ಸಿಗಳಿಗೆ ಜಿಪಿಎಸ್ ಸಾಧನ, ಆರ್‌ಎಫ್ ಐಡಿ ಟ್ಯಾಕ್ಸ್, ಎಂಡಿಟಿ ಸಾಧನಗಳನ್ನು ಅಲ್ಲದೆ ಪ್ಯಾನಿಕ್ ಬಟನ್ ಅಳವಡಿಸಿ ಸಜ್ಜಾಗಿರಿಸಲಾಗಿದೆ. 24 ಗಂಟೆಯೂ ವಾಹನಗಳ ಚಲನವಲನಗಳ ಬಗ್ಗೆ ನಿಗಾ ವಹಿಸುವ ವ್ಯವಸ್ಥೆಯೂ ಇರುತ್ತದೆ. ಈ ರೀತಿಯ ಕೆಎಸ್‌ಟಿಡಿಸಿ ಕಾರುಗಳನ್ನು ಸುಲಭವಾಗಿ ಗುರುತಿಸಲು ಗುಲಾಬಿ ಬಣ್ಣದ ಬಂಪರ್‌ಗಳನ್ನು ಹೊಂದಿರುವಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅವಶ್ಯವಿರುವ ಮಹಿಳಾ ವಿಮಾನ ಪ್ರಯಾಣಿಕರು ಈ ಟ್ಯಾಕ್ಸಿಗಳ ಸೇವೆಯನ್ನು ಪಡೆದುಕೊಳ್ಳಲು ಕೆಎಸ್‌ಟಿಡಿಸಿಯ 24 ಗಂಟೆ ಕೆಲಸ ಮಾಡುವಂತ ಕಾಲ್ ಸೆಂಟರ್ ಸಂಖ್ಯೆ 080-4466 4466 ಕ್ಕೆ ಕರೆ ಮಾಡಬಹುದಾಗಿದೆ. www.kstdc.co ವೆಬ್ಸೈಟ್‌ನಲ್ಲಿ ಆನ್‌ಲೈನ್ ಮೂಲಕವೂ ಸಂಪರ್ಕಿಸಬಹುದಾಗಿದೆ.