ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ

Update: 2019-01-05 18:35 GMT

ಎಎಫ್‌ಸಿ ಏಶ್ಯಕಪ್ ಫುಟ್ಬಾಲ್

ಅಬುಧಾಬಿ, ಜ.5: ಎಎಫ್‌ಸಿ ಏಶ್ಯಕಪ್ ಫುಟ್ಬಾಲ್ ಶನಿವಾರ ಆರಂಭವಾಗಿದ್ದು, ಭಾರತ ಜ.6ರಂದು ತನ್ನ ಅಭಿಯಾನವನ್ನು ಥಾಯ್ಲೆಂಡ್ ವಿರುದ್ಧ ಆರಂಭಿಸಲಿದೆ.

ಆರಂಭದಲ್ಲಿ ಏಶ್ಯಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳ ಸಂಖ್ಯೆ 16 ಇದ್ದು, ಪ್ರಸಕ್ತ ಟೂರ್ನಿಯಲ್ಲಿ ಈ ಸಂಖ್ಯೆಯನ್ನು 24ಕ್ಕೆ ಏರಿಸಲಾಗಿದೆ. 1964ರಲ್ಲಿ ಏಶ್ಯಕಪ್ ಟೂರ್ನಿಯ ಫೈನಲ್‌ನಲ್ಲಿ ಇಸ್ರೇಲ್ ವಿರುದ್ಧ ಸೋತು ರನ್ನರ್‌ಅಪ್‌ಗೆ ತೃಪ್ತಿಪಟ್ಟ ಭಾರತಕ್ಕೆ ಆನಂತರ ಹೆಚ್ಚು ಸಾಧನೆ ತೋರಲಾಗಿಲ್ಲ. ಸದ್ಯದ ಟೂರ್ನಿ ಚೆಟ್ರಿ ಬಳಗಕ್ಕೆ ಒಂದು ಉತ್ತಮ ಅವಕಾಶವಾಗಿದ್ದು ಪ್ರದರ್ಶನವನ್ನು ಉತ್ತಮ ಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

1984 ಹಾಗೂ 2011ರ ಟೂರ್ನಿಗಳಲ್ಲಿ ಭಾಗವಹಿಸಿದ್ದ ಭಾರತ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಎಲ್ಲ ಹಳೆಯ ನಿರಾಶೆಗಳನ್ನು ಮರೆತು ಮುನ್ನುಗ್ಗಲು ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್ ನೇತೃತ್ವದ ತಂಡ ತಯಾರಾಗಿದೆ. ಥಾಯ್ಲೆಂಡ್ ವಿರುದ್ಧ ಅಬುಧಾಬಿಯ ಅಲ್ ನಹ್ಯಾನ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಭಾರತದ ಪರ ಧನಾತ್ಮಕ ಫಲಿತಾಂಶವೇನಾದರೂ ಬಂದರೆ 16ರ ಘಟ್ಟಕ್ಕೆ ತಲುಪುವ ಆಸೆಯನ್ನು ಇನ್ನಷ್ಟು ಉದ್ದೀಪಿಸಲಿದೆ. ಏಶ್ಯನ್ ಫುಟ್ಬಾಲ್ ಫೆಡರೇಶನ್ ಚಾಂಪಿಯನ್‌ಶಿಪ್‌ನಲ್ಲಿ ಹಲವು ಗೋಲುಗಳನ್ನು ಸಿಡಿಸಿರುವ ಥಾಯ್ಲೆಂಡ್‌ಗೆ ಭಾರತದ ಶಿಸ್ತಿನ ರಕ್ಷಣಾ ವಿಭಾಗ ಪ್ರಬಲ ಸವಾಲೊಡ್ಡುವ ಸಾಧ್ಯತೆಯಿದೆ. ಸದ್ಯ ಭಾರತ ವಿಶ್ವ ರ್ಯಾಂಕಿಂಗ್‌ನಲ್ಲಿ 97ನೇ ಸ್ಥಾನದಲ್ಲಿದ್ದರೆ, ಥಾಯ್ಲೆಂಡ್ 118ನೇ ಸ್ಥಾನದಲ್ಲಿದೆ.

► ಪಂದ್ಯದ ಸಮಯ: ಸಾಯಂಕಾಲ 5:30

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News