ಶಬರಿಮಲೆಗೆ ಮೊದಲು ಭೇಟಿ ನೀಡಿದ 50 ವರ್ಷದೊಳಗಿನ ಮಹಿಳೆ ಯಾರು?

Update: 2019-01-06 04:00 GMT

ತಿರುವನಂತಪುರ, ಜ.6: ತಮಿಳುನಾಡು ಮೂಲದ 50 ವರ್ಷದೊಳಗಿನ ಮೂವರು ಮಲೇಷ್ಯನ್ ಮಹಿಳೆಯರು ಜನವರಿ 1ರಂದೇ ಶಬರಿಮಲೆ ದೇವಳಕ್ಕೆ ಭೇಟಿ ನೀಡಿದ್ದನ್ನು ಚಿತ್ರಿಸುವ ವೀಡಿಯೊವನ್ನು ಕೇರಳ ಪೊಲೀಸ್ ವಿಶೇಷ ವಿಭಾಗ ಸೆರೆಹಿಡಿದಿದೆ. ಸೆಪ್ಟೆಂಬರ್ 28ರಂದು ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ಮೊಟ್ಟಮೊದಲು ಭೇಟಿ ನೀಡಿದ ಮಹಿಳೆಯರು ಎನ್ನಲಾದ ಬಿಂದೂ, ಅಮ್ಮಿಣಿ ಮತ್ತು ಕನಕದುರ್ಗ ಭೇಟಿ ನೀಡುವ ಮುನ್ನಾ ದಿನವೇ ಈ ಮೂವರು ಮಹಿಳೆಯರು ಭೇಟಿ ನೀಡಿ ದರ್ಶನ ಪಡೆದಿದ್ದನ್ನು ಪೊಲೀಸ್ ವೀಡಿಯೊ ಸೆರೆ ಹಿಡಿದಿದೆ. ಈ ವೀಡಿಯೊ ತುಣುಕು ತನ್ನ ಬಳಿ ಇದೆ ಎಂದು "ಟೈಮ್ಸ್ ಆಫ್ ಇಂಡಿಯಾ" ಹೇಳಿಕೊಂಡಿದೆ.

ಜನವರಿ ಒಂದರಿಂದೀಚೆಗೆ 50 ವರ್ಷಕ್ಕಿಂತ ಕೆಳಗಿನ ಮತ್ತೆ ನಾಲ್ವರು ಮಹಿಳೆಯರು ಮಂದಿರಕ್ಕೆ ಭೇಟಿ ನೀಡಿದ ಬಗ್ಗೆ ಅನಧಿಕೃತ ವರದಿಗಳಿವೆ. ಇದರಿಂದ ದೇಗುಲಕ್ಕೆ ಒಟ್ಟು ಭೇಟಿ ನೀಡಿದ 50 ವರ್ಷಕ್ಕಿಂತ ಕೆಳಗಿನ ಮಹಿಳೆಯರ ಸಂಖ್ಯೆ 10ಕ್ಕೆ ತಲುಪಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಮಹಿಳೆಯರ ವಿವರಗಳನ್ನು ಪೊಲೀಸರು ಸಂಗ್ರಹಿಸಿದ್ದು, ಅಗತ್ಯಬಿದ್ದರೆ ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ.

ಮಲೇಷ್ಯನ್ ಮಹಿಳೆಯರ ಭೇಟಿಯನ್ನು ಪೊಲೀಸರು ದೃಢಪಡಿಸಿದ್ದರೂ, ಅವರು ಶಬರಿಮಲೆಯಲ್ಲಿ ದರ್ಶನ ಪಡೆದಿದ್ದಾರೆಯೇ ಎಂದು ಬಹಿರಂಗಪಡಿಸಿಲು ನಿರಾಕರಿಸಿದ್ದಾರೆ. ಈ ಮೂವರು ಮಹಿಳೆಯರ ಗುರುತು, ಹೆಸರು ಮತ್ತು ವಯಸ್ಸಿನ ವಿವರಗಳು ಪೊಲೀಸರ ಬಳಿ ಇವೆ. ಮಲೇಷ್ಯಾದಲ್ಲಿರುವ ತಮಿಳು ಮೂಲದ 25 ಯಾತ್ರಿಗಳ ತಂಡದಲ್ಲಿ ಇವರಿದ್ದರು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಈ ಮೂವರು ಮಲೇಷ್ಯನ್ ಮಹಿಳೆಯರು ಜನವರಿ 1ರಂದು ಭೇಟಿ ನೀಡಿದ್ದು, ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದಾಗ ಪಂಬಾದಲ್ಲಿ ಈ ವೀಡಿಯೊ ಚಿತ್ರೀಕರಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಮೊಬೈಲ್ ಕ್ಯಾಮೆರಾದಲ್ಲಿ 14 ಸೆಕೆಂಡ್‌ಗಳ ಈ ವೀಡಿಯೊ ಚಿತ್ರೀಕರಿಸಲಾಗಿದೆ. ಈ ಮಹಿಳೆಯರು ಮುಖವನ್ನು ಶಾಲಿನಿಂದ ಮುಚ್ಚಿಕೊಂಡಿದ್ದಾರೆ.

ಜನವರಿ 1ರಂದು ಮುಂಜಾನೆ ದೇವಸ್ಥಾನಕ್ಕೆ ಭೇಟಿ ನೀಡಿದ ಮಲೇಷ್ಯನ್ ತಂಡ 10 ಗಂಟೆ ಸುಮಾರಿಗೆ ಪಂಬಾಗೆ ವಾಪಸ್ಸಾಗಿತ್ತು. ಜನವರಿ 2ರಂದು ಮುಂಜಾನೆ ಬಿಂದೂ ಹಾಗೂ ಕನಕದುರ್ಗ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮಫ್ತಿಯಲ್ಲಿದ್ದ ಪೊಲೀಸರ ನೆರವಿನೊಂದಿಗೆ ಅವರು ಮಂದಿರ ಪ್ರವೇಶಿಸುತ್ತಿರುವ ವೀಡಿಯೊ ವೈರಲ್ ಆಗಿತ್ತು. ಆದರೆ ಮಲೇಷ್ಯನ್ ತಂಡ ಯಾವುದೇ ಪೊಲೀಸ್ ರಕ್ಷಣೆ ಇಲ್ಲದೇ ದೇವಾಲಯಕ್ಕೆ ಭೇಟಿ ನೀಡಿತ್ತು ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News