ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಆಸರೆ ಗೃಹ ನಿರ್ಮಿಸಿ: ಅಧಿಕಾರಿಗಳಿಗೆ ಟಿ.ಎಂ.ವಿಜಯ ಭಾಸ್ಕರ್ ಸೂಚನೆ
ಬೆಂಗಳೂರು, ಜ.6: ಬೆಂಗಳೂರಿನ ಸಂಚಾರ ಸಂಕೇತ ದೀಪಗಳ ಬಳಿ ಭಿಕ್ಷಾಟನೆ ನಡೆಸುತ್ತಿರುವವರನ್ನು ಕರೆದೊಯ್ದು ಅವರಿಗೆ ಪುನರ್ವಸತಿ ಕಲ್ಪಿಸುವತ್ತ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಭಿಕ್ಷಾಟನೆಯನ್ನೇ ವೃತ್ತಿಯನ್ನಾಗಿಸಿಕೊಳ್ಳುತ್ತಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ನಗರದ ಮಾಗಡಿ ರಸ್ತೆಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಪ್ರತ್ಯೇಕ ಆಸರೆ ಗೃಹ ನಿರ್ಮಿಸಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಅವರೂ ಕೂಡಾ ಎಲ್ಲರಂತೆ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳೆಯರು ಮತ್ತು ಮಕ್ಕಳ ಸಾಗಣೆಯನ್ನು ನಿಯಂತ್ರಿಸಲು ರಚಿಸಿರುವ ರಾಜ್ಯ ಮಟ್ಟದ ಮಾನವ ಅಕ್ರಮ ಸಾಗಣೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಭಿಕ್ಷಾಟನೆ ಮಾಡುತ್ತಿರುವವರಿಗೆ ಪಡಿತರ ಚೀಟಿ ಕೊಡಿಸಿಕೊಟ್ಟು ಅನ್ನಭಾಗ್ಯ ಯೋಜನೆಯ ವ್ಯಾಪ್ತಿಗೊಳಪಡಿಸಿದರೆ ಹಾಗೂ ಆಶ್ರಯ ಯೋಜನೆಯಡಿ ಸೂರು ಕಲ್ಪಿಸಿದರೆ ಭಿಕ್ಷಾಟನೆಯಲ್ಲಿ ತೊಡಗಿರುವವರು ನಿಶ್ಚಯವಾಗಿಯೂ ಭಿಕ್ಷಾಟನೆಯಿಂದ ಅವರು ದೂರ ಉಳಿಯುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಚಾರಿ ವಿಚಕ್ಷಣಾ ದಳ ಸ್ಥಾಪಿಸಿ
ರಾಜ್ಯದ ರಾಜಧಾನಿಯಲ್ಲಿ ಭಿಕ್ಷುಕರ ಹಾವಳಿ ಹೆಚ್ಚುತ್ತಿದೆ ಹಾಗೂ ಭಿಕ್ಷಾಟನೆ ದಂಧೆಯ ರೂಪ ಪಡೆಯುತ್ತಿದೆ ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಮತ್ತು ವಸತಿ ಇಲಾಖೆಯ ಸಹಯೋಗ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಕಾರದೊಡನೆ ಸಂಚಾರಿ ವಿಚಕ್ಷಣಾ ದಳವನ್ನು ಸ್ಥಾಪಿಸಿ ಭಿಕ್ಷಾಟನೆ ನಡೆಸುತ್ತಿರುವವರನ್ನು ಕರೆದೊಯ್ದು, ಅವರಿಗೆ ಆಸರೆ ಮತ್ತು ಪುನರ್ವಸತಿ ಕಲ್ಪಿಸಲು ಕ್ರಮ ವಹಿಸುವಂತೆ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದರು.
ಬಾಲಮಂದಿರ ಅಭಿವೃದ್ಧಿ ಸಮಿತಿ ರಚಿಸಿ: ನಿವಾಸಿಗಳಿಗೆ ಆಧಾರ್ ಕಾರ್ಡ್ ದೊರಕಿಸಿಕೊಡಿ
ಶಾಲಾ ಅಭಿವೃದ್ಧಿ ಮತ್ತು ನಿಗಾ ಸಮಿತಿಯ ಮಾದರಿಯಲ್ಲೇ ರಾಜ್ಯದ ಎಲ್ಲಾ 59 ಬಾಲಮಂದಿರಗಳಲ್ಲೂ ಅಭಿವೃದ್ಧಿ ಸಮಿತಿಗಳನ್ನು ರಚಿಸಿ ಹಾಗೂ ಅಲ್ಲಿನ ನಿವಾಸಿಗಳಿಗೆ ಆಧಾರ್ ಕಾರ್ಡ್ ದೊರಕಿಸಿ ಕೊಡಿ. ಇದರಿಂಧ ಬಾಲಮಂದಿರದ ಮಕ್ಕಳು ಮತ್ತೆ ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಲು ಅನುಕೂಲವಾಗುತ್ತದೆ. ಅದೇ ರೀತಿ, ಜೀತಮುಕ್ತರಾದವರಿಗೂ ಆಧಾರ್ ಕಾರ್ಡ್ ಮಾಡಿಸಿ. ಪಡಿತರ ಚೀಟಿ ಕೊಡಿಸಿ. ಅಲ್ಲದೆ, ಅವರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಅವರಿಗೂ ಬದುಕು ಕಟ್ಟಿಕೊಡಿ. ಜೀತಮುಕ್ತರ ಮಕ್ಕಳಿಗೆ ಸೇತುಬಂಧ ಶಿಬಿರ (ಬ್ರಿಡ್ಜ್ ಕೋರ್ಸ್) ಏರ್ಪಡಿಸಿ ಶಿಕ್ಷಣ ಕೊಡಿಸಿ ಎಂದು ವಿಜಯ ಭಾಸ್ಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಹದ್ದಿನ ಕಣ್ಣಿರಿಸಿ !
ಮಾನವ ಸಾಗಣೆಯನ್ನು ತಡೆಗಟ್ಟಲು ಬಸ್ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣದ ಜೊತೆಗೆ ವಿಮಾನ ನಿಲ್ದಾಣದ ಬಳಿಯೂ ಹದ್ದಿನ ಕಣ್ಣಿರಿಸುವಂತೆ ಮಕ್ಕಳ ಸಹಾಯವಾಣಿ ಹಾಗೂ ವನಿತಾ ಸಹಾಯವಾಣಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವತ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ ಮುಖ್ಯ ಕಾರ್ಯದರ್ಶಿ, ಸಂತ್ರಸ್ತ ಅಥವಾ ನಿರಾಶ್ರಿತ ಮಹಿಳೆಯರು, ಮಕ್ಕಳು, ಪುರುಷರು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಪುನರ್ವಸತಿಗಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸಿ. ಇದಕ್ಕೆ ಸಂಬಂಧಿಸಿದಂತೆ ಜನವರಿ 24ರೊಳಗೆ ಸಾಮಾನ್ಯ ಕಾರ್ಯನಿರ್ವಹಣಾ ಪ್ರಕ್ರಿಯೆಗಳನ್ನು (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್) ರೂಪಿಸಿ ಪ್ರಸ್ತುತಪಡಿಸಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಬಹುಶಃ ಇಡೀ ಭಾರತದಲ್ಲಿಯೇ ಪ್ರಪ್ರಥಮವಾಗಿ ರಾಜ್ಯದಲ್ಲಿ ಮಕ್ಕಳ ರಕ್ಷಣೆಗಾಗಿ ಪ್ರತ್ಯೇಕ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ನಿರ್ದೇಶನಾಲಯವು ಎಲ್ಲಾ ಸುಧಾರಣಾ ಸಂಸ್ಥೆಗಳು (ಕರೆಕ್ಷನ್ ಇನ್‍ಸ್ಟಿಟ್ಯೂಷನ್ಸ್) 59 ಬಾಲಮಂದಿರಗಳು ( ರಿಮಾಂಡ್ ಹೋಮ್ಸ್), 18 ಉಜ್ವಲ ಕೇಂದ್ರಗಳು, ಎಂಟು ವೀಕ್ಚಣಾಲಯಗಳು (ಸ್ಟೇಟ್ ಹೋಮ್ ಫಾರ್ ವಿಮೆನ್) ಹಾಗೂ ನಾಲ್ಕು ಸ್ವೀಕಾರ ಕೇಂದ್ರಗಳ ( ರಿಸೆಪ್ಷನ್ ಸೆಂಟರ್ಸ್ ) ನಿಗಾ ಮತ್ತು ಉಸ್ತುವಾರಿ ವಹಿಸಬೇಕು ಎಂದು ಸಲಹೆ ನೀಡಿದರಲ್ಲದೆ, ನೂತನ ನಿರ್ದೇಶಕಿ ತನುಶ್ರೀ ದೇಬ್ ಎಲ್ಲೆಡೆ ಭೇಟಿ ನೀಡಿ ಈ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂದು ಆಶಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಮನೆ ಕೆಲಸ, ಸುಳ್ಳು ಮದುವೆ, ಸುಳ್ಳು ದತ್ತು ಹಾಗೂ ಗುಪ್ತ ಉದ್ಯೋಗದ ಹೆಸರಿನಲ್ಲಿ ಲೈಂಗಿಕವಾಗಿ ಹಾಗೂ ಆರ್ಥಿಕವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ತಳ್ಳುವ ಸಾಗಣೆ ದಂಧೆಯ ಕುರಿತು ಬೆಳಕು ಚೆಲ್ಲಿದರು. ಅಲ್ಲದೆ, ಕರ್ನಾಟಕವು ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ಮಾನವ ಸಾಗಾಣೆ ಮೂಲ, ರವಾನೆ ಹಾಗೂ ಗಮ್ಯಸ್ಥಾನವಾಗುತ್ತಿದೆ ಎಂಬ ಕಳವಳಕಾರಿ ಅಂಶವನ್ನು ಸಭೆಯ ಗಮನಕ್ಕೆ ತಂದರು. ಜೊತೆಗೆ, ರಾಜ್ಯದಲ್ಲಿ 2017 ನೇ ಸಾಲಿನಲ್ಲಿ 148 ಮಹಿಳೆಯರು ಮತ್ತು 39 ಮಕ್ಕಳ ಸಾಗಣೆಯಾಗಿದೆ. ಅಂತೆಯೇ, 2018ನೇ ಸಾಲಿನಲ್ಲಿ 113 ಮಹಿಳೆಯರು ಹಾಗೂ 28 ಮಕ್ಕಳ ಸಾಗಣೆಯಾಗಿದೆ ಎಂಬ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದರು.
ಗೃಹ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ ನಾಯಕ್, ಕಾರ್ಮಿಕ ಇಲಾಖೆಯ ಆಯುಕ್ತ ಡಿ. ಪಾಲಯ್ಯ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.