ವಿವೇಕಾನಂದರನ್ನು ತಪ್ಪಾಗಿ ಅರ್ಥೈಸಲಾಗಿದೆ: ದಿನೇಶ್ ಗುಂಡೂರಾವ್

Update: 2019-01-06 12:07 GMT

ಬೆಂಗಳೂರು, ಜ.6: ಸ್ವಾಮಿ ವಿವೇಕಾನಂದರ ವೈಚಾರಿಕ ವಿಚಾರಗಳನ್ನು ತಪ್ಪಾಗಿ ಅರ್ಥೈಸಿಕೊಂಡು, ದ್ವೇಷ ಬಿತ್ತುವ ಕಾರ್ಯ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಹೇಳಿದರು.

 ರವಿವಾರ ನಗರದ ಪುರಭವನದಲ್ಲಿ ಸಂಕಲ್ಪ ಸಂಸ್ಥೆ ಆಯೋಜಿಸಿದ್ದ, ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರಕವಿ ಕುವೆಂಪು ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿವೇಕಾನಂದರ ವೈಚಾರಿಕ ನಿಲುವುಗಳು ಎಲ್ಲ ಧರ್ಮದ ಸದಸ್ಯರಿಗೂ ಮಾರ್ಗ ದರ್ಶನವಾಗಿದೆ. ಅವರ ಕ್ರಾಂತಿಕಾರಿ ಮಾತುಗಳು ನಮ್ಮ ಮಾನವೀಯ ಮೌಲ್ಯಗಳ ಬದಲಾವಣೆಗೆ ಪ್ರೇರಕವಾಗಿದೆ. ಆದರೆ, ಇದನ್ನೇ ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅಲ್ಲದೆ, ವಿವೇಕಾನಂದರು ಹಿಂದೂ ಧರ್ಮದ ಮೌಲ್ಯಗಳನ್ನು ಗುರುತಿಸುವ ಜೊತೆಗೆ, ಇತರೆ ಧರ್ಮದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕೆಂದು ಮಾರ್ಗದರ್ಶನ ಮಾಡಿದ್ದರು ಎಂದರು.

ಸೇವೆ, ಚಾರಿತ್ರ ಹಾಗೂ ಪರಿಶುದ್ಧತೆಗೆ ವಿವೇಕಾನಂದರು ಕರೆ ನೀಡಿದರು. ಅವರು ಭಾರತವನ್ನು ಅದ್ಭುತ ಹಾಗೂ ಪವಿತ್ರ ಪ್ರದೇಶವಾಗಿ ಕಂಡಿದ್ದರು. ಪ್ರಪಂಚದಲ್ಲಿ ಭಾರತದ ಪಾತ್ರ ಏನು ಎಂಬುದನ್ನು ಚಿಂತಿಸಿದ್ದರು. ಸ್ವಾಮಿ ವಿವೇಕಾನಂದರು ಕೇವಲ ಸಾಮಾನ್ಯ ದೇಶಪ್ರೇಮಿಯಾಗಿರದೆ ಬಹು ವಿಸ್ತಾರವಾದ ಯೋಚನೆಗಳುಳ್ಳ ದೇಶಾರಾಧಕ ಆಗಿದ್ದರು. ಅವರನ್ನು ಕೇವಲ ಭಾರತಕ್ಕಷ್ಟೇ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಬಣ್ಣಿಸಿದರು.

ಯುವಕ ಪೀಳಿಗೆ ಮಾತ್ರ ಈ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಇನ್ನೂ, ಸಮಾಜದಲ್ಲಿ ಬದಲಾವಣೆ ಕಾರ್ಯ ನಡೆಯಬೇಕು. ನಮ್ಮ ನಡುವಿನ ಗುಂಪುಗಾರಿಕೆ, ಜಾತಿ ತರತಮ್ಯ, ಕೋಮು ದ್ವೇಷಗಳನ್ನು ಪ್ರತಿಯೊಬ್ಬರು ಹೋಗಲಾಡಿಸಬೇಕು. ವೈಚಾರಿಕ ಮತ್ತು ಸಮಾನತೆ ತತ್ವಗಳು ಎಲ್ಲರಿಗೂ ಬೋಧನೆ ಮಾಡಬೇಕು ಎಂದರು.

ಯುವ ಪೀಳಿಗೆಗೆ ಹಾಗೂ ಸಾರ್ವಜನಿಕರಿಗೆ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಜೀವನ ಮೌಲ್ಯ, ವಿಶ್ವಶಾಂತಿ ಮತ್ತು ವಿವಿಧತೆಯಲ್ಲಿ ಏಕತೆಯ ಬಗ್ಗೆ ಮಾಡಿರುವ ಭಾಷಣದ ತುಣುಕು ಹಾಗೂ ಸಾರ್ವಜನಿಕ ಸಭೆಗಳಲ್ಲಿ ಮಾಡಿರುವ ಭಾಷಣಗಳನ್ನು ತಲುಪಿಸುವುದು ಅವಶ್ಯವಾಗಿದೆ ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಚಿಂತಕ ಕೆ.ಈ.ರಾಧಕೃಷ್ಣ, ಸಂಕಲ್ಪ ಅಧ್ಯಕ್ಷ ನಟರಾಜ್ ಗೌಡ, ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಅದ್ದೆ, ಸೂರ್ಯ ಮುಕಂದರಾಜ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News