'ಗಾವಸ್ಕರ್- ಬಾರ್ಡರ್ ಟ್ರೋಫಿ' ಕೊನೆಯ ಟೆಸ್ಟ್ : ಸಿಡ್ನಿಯಲ್ಲಿ ಮತ್ತೆ ಮಳೆಯದ್ದೇ ಆಟ

Update: 2019-01-07 03:37 GMT

ಸಿಡ್ನಿ, ಜ. 7: ಗಾವಸ್ಕರ್- ಬಾರ್ಡರ್ ಟ್ರೋಫಿ ಸರಣಿಯ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅತಿಥೇಯರಿಗೆ ಸೋಲುಣಿಸಿ ಸರಣಿ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುವ ಭಾರತ ತಂಡದ ಉತ್ಸಾಹಕ್ಕೆ ಮಳೆರಾಯ ತಣ್ಣೀರೆರಚಿದ್ದಾನೆ. ಪಂದ್ಯದ ಕೊನೆಯ ದಿನ ಕೂಡಾ ಭಾರಿ ಮಳೆಯಿಂದಾಗಿ ಆಟ ಆರಂಭವಾಗಿಲ್ಲ.

ನಾಲ್ಕನೇ ದಿನ ಕೆಲವು ಓವರ್‌ಗಳ ಆಟವಷ್ಟೇ ನಡೆಯಲು ಸಾಧ್ಯವಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 622 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರೆ, ಅತಿಥೇಯರು 300 ರನ್‌ಗಳಿಗೆ ಆಲೌಟ್ ಆಗಿದ್ದರು.

322 ರನ್‌ಗಳ ಹಿನ್ನಡೆಯೊಂದಿಗೆ ಫಾಲೊ ಆನ್ ಆದ ಆಸ್ಟ್ರೇಲಿಯಾ ತಂಡ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದ್ದಾಗ ರವಿವಾರ ಮಂದ ಬೆಳಕಿನ ಕಾರಣದಿಂದ ಆಟ ರದ್ದಾಗಿತ್ತು. 30 ವರ್ಷಗಳಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡ ತವರಿನಲ್ಲಿ ಫಾಲೊ ಆನ್‌ಗೆ ಗುರಿಯಾಗಿತ್ತು. 1988ರಲ್ಲಿ ಇಂಗ್ಲೆಂಡ್ ನಾಯಕ ಮೈಕ್ ಗ್ಯಾಟಿಂಗ್ ಇದೇ ಮೈದಾನದಲ್ಲಿ ಅತಿಥೇಯ ತಂಡಕ್ಕೆ ಫಾಲೊ ಆನ್ ವಿಧಿಸಿದ್ದರು.

ಸೋಮವಾರ ಕೂಡಾ ಭಾರಿ ಮಳೆಯಿಂದಾಗಿ ಭೋಜನ ವಿರಾಮವರೆಗಿನ ಆಟ ನಡೆಯಲಿಲ್ಲ. ಭಾರಿ ಮಳೆ ಮುಂದುವರಿದಿರುವುದರಿಂದ ಐದನೇ ದಿನದ ಆಟದ ಸಾಧ್ಯತೆ ವಿರಳ.

ಸರಣಿಯಲ್ಲಿ ಈಗಾಗಲೇ ಭಾರತ 2-1 ಮುನ್ನಡೆಯಲ್ಲಿದ್ದು, ಸರಣಿ ಸಮಬಲ ಮಾಡಿಕೊಳ್ಳಲು ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಆದರೆ ವರುಣನ ಕೃಪೆಯಿಂದಾಗಿ ಸಂಭಾವ್ಯ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಿದ್ದು, ಸರಣಿಯನ್ನು ಭಾರತಕ್ಕೆ ಒಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News