ದುರ್ಬಲಗೊಳ್ಳುತ್ತಿರುವ ಕಾರ್ಮಿಕ ಸಂಘಟನೆಗಳು

Update: 2019-01-08 07:15 GMT

ಕೇಂದ್ರ ಸರಕಾರದ ಕಾರ್ಮಿಕವಿರೋಧಿ ನೀತಿಗಳು ಮತ್ತು ಏಕಪಕ್ಷೀಯ ಕಾರ್ಮಿಕ ಸುಧಾರಣೆಗಳ ವಿರುದ್ಧ ದೇಶದ 20 ಕೋಟಿ ಕಾರ್ಮಿಕರು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಬಂದ್ ಘೋಷಿಸಿದ್ದಾರೆ. ಹತ್ತು ಕೇಂದ್ರ ಕಾರ್ಮಿಕ ಒಕ್ಕೂಟಗಳು ಈ ಬಂದ್‌ಗೆ ಕೈಜೋಡಿಸಿವೆ. ಎರಡು ದಿನಗಳ ಕಾಲ ಬಂದ್ ಆಚರಣೆಯೆನ್ನುವುದು ದೇಶದ ಅರ್ಥವ್ಯವಸ್ಥೆಗೆ ದುಬಾರಿಯೇ ಹೌದು.ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರ ಕಾರ್ಮಿಕ ಹಿತಾಸಕ್ತಿಯನ್ನು ಸಂಪೂರ್ಣ ಮರೆತು, ಕಾರ್ಪೊರೇಟ್ ಪರವಾಗಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ಕಾರ್ಮಿಕರ ಪ್ರತಿಭಟನೆಗೆ ಅದು ಯಾವ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಎರಡು ಬೃಹತ್ ರೈತ ರ್ಯಾಲಿಗಳಿಗೂ ಸರಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಸರಕಾರವನ್ನು ಮಾತನಾಡುವಂತೆ ಮಾಡಬೇಕಾದರೆ, ಇಂತಹದೊಂದು ಕಠಿಣ ನಿಲುವು ಅಗತ್ಯ ಎಂದು ಸಂಘಟನೆಗಳು ಭಾವಿಸಿವೆ. ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಭಾರತೀಯ ಮಜ್ದೂರು ಸಂಘಟನೆ ಒಂದು ಹೊರತು ಪಡಿಸಿದರೆ ಬಹುತೇಕ ಕಾರ್ಮಿಕ ಸಂಘಟನೆಗಳು ಇದನ್ನು ಬೆಂಬಲಿಸಿವೆ.

ದೇಶದಲ್ಲಿ ಕಾರ್ಮಿಕ ವಿರೋಧಿ ನೀತಿಗಳು ಯಾವ ಆತಂಕವಿಲ್ಲದೆ ಜಾರಿಯಾಗುತ್ತಿರುವುದಕ್ಕೆ ಎರಡು ಕಾರಣಗಳಿವೆ. ಒಂದು, ಕಾರ್ಮಿಕ ಸಂಘಟನೆಗಳು ದಿನೇ ದಿನೇ ದುರ್ಬಲಗೊಳ್ಳುತ್ತಿವೆ. ಎರಡನೆಯದು, ಕಾರ್ಮಿಕ ಸಂಘಟನೆಗಳು ವಿವಿಧ ರಾಜಕೀಯ ಪಕ್ಷಗಳಲ್ಲಿ ಹಂಚಿಹೋಗಿವೆ. ಈ ಕಾರಣದಿಂದಲೇ, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಕಾರ್ಮಿಕ ಸಂಘಟನೆಗಳು ಮುಂದಾಗುವ ಮೊದಲು, ಕಾರ್ಮಿಕ ಸಂಘಟನೆಗಳ ಸಮಸ್ಯೆಗಳನ್ನು ಪರಿಹರಿಸುವ ಅನಿವಾರ್ಯಕ್ಕೆ ಸಿಲುಕಿಕೊಂಡಿದೆ. ಒಂದು ಕಾಲದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಕಾರ್ಮಿಕ ಸಂಘಟನೆಗಳ ಜೊತೆಗೆ ಬೀದಿಗಿಳಿಯುತ್ತಿರುವ ಕಾರ್ಮಿಕರನ್ನು ರಾಜಕೀಯ ಪಕ್ಷಗಳು ದಾರಿತಪ್ಪಿಸಿವೆ. ಇಂದು ಅದೇ ಕಾರ್ಮಿಕರು ತಮ್ಮ ಧರ್ಮ, ಜಾತಿ, ದೇವಸ್ಥಾನ ಎಂದು ಬೀದಿಗಿಳಿಯ ತೊಡಗಿದ್ದಾರೆ. ತಮ್ಮ ವಿರುದ್ಧವೇ ನೀತಿಗಳನ್ನು ಅನುಷ್ಠಾನಗೊಳಿಸುವ ರಾಜಕೀಯ ಪಕ್ಷಗಳ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ದೇಶದ ಶ್ರಮಶಕ್ತಿಯ ಶೇ.8 ಭಾಗದಷ್ಟು ಜನರು ಮಾತ್ರ ಸಂಘಟಿತ ಕ್ಷೇತ್ರದಲ್ಲಿದ್ದಾರೆ. ಇನ್ನುಳಿದ ಶೇ.92ರಷ್ಟು ಕಾರ್ಮಿಕರು ಅಸಂಘಟಿತ ಕ್ಷೇತ್ರದಲ್ಲಿದ್ದು ದಾರುಣವಾದ ಉದ್ಯೋಗ ಮತ್ತು ಜೀವನ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಅದರ ಬಗ್ಗೆ ಕಾರ್ಮಿಕ ಸಂಘಟನೆಗಳು ಮತ್ತು ಸರಕಾರಗಳು ಗಮನಹರಿಸಲೇ ಬೇಕಾದ ಅಗತ್ಯವಿದೆ. ಆದರೆ ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವಲ್ಲಿ ಹಲವಾರು ತೊಡಕುಗಳಿವೆ. ವಿಸ್ತಾರಗೊಳ್ಳುತ್ತಿರುವ ಈ ಅಸಂಘಟಿತ ಕ್ಷೇತ್ರದಲ್ಲಿ ಯುವ ಜನರು ಮತ್ತು ಮಹಿಳೆಯರು ಹೆಚ್ಚಾಗಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಅದಕ್ಕೆ ನಿರ್ದಿಷ್ಟವಾದ ಉದ್ಯೋಗ ಸಂಬಂಧಿ ಸಮಸ್ಯೆಗಳನ್ನು ಮುಂದಿಟ್ಟಿದೆ. ಇನ್ನು ಸಾರಿಗೆ ಕ್ಷೇತ್ರದ ಚಹರೆಯೇ ರಾತ್ರೋರಾತ್ರಿ ಬದಲಾಗಿದ್ದು, ಖಾಸಗಿ ಟ್ಯಾಕ್ಸಿ ಅದರಲ್ಲೂ ನಿರ್ದಿಷ್ಟವಾಗಿ ಓಲಾ ಮತ್ತು ಉಬರ್‌ನ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಭಾರತವು ಹಿಂದೆಂದೂ ಕಂಡಿರಲಿಲ್ಲ. ಬಹುಪಾಲು ಸಾರ್ವಜನಿಕ ಕ್ಷೇತ್ರದ ಕಂಪೆನಿಗಳು ಆಯಾ ಕಾಲದ ಸರಕಾರಗಳ ಮಧ್ಯ ಪ್ರವೇಶದಿಂದ ಬಸವಳಿಯುತ್ತಿವೆ. ಆದರೆ ಅವುಗಳನ್ನು ಪುನರುತ್ಥಾನಗೊಳಿಸುವ ಯೋಜನೆಗಳ ಬಗ್ಗೆಯಾಗಲೀ ಅಥವಾ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಬದುಕಿಗೆ ಸಂಬಂಧಪಟ್ಟ ಪುನಶ್ಚೇತನ ಪ್ಯಾಕೇಜುಗಳಂಥ ವಿಷಯಗಳಲ್ಲೂ ಸರಕಾರಗಳು ಕಾರ್ಮಿಕರ ಜೊತೆಗಾಗಲೀ ಅಥವಾ ಕಾರ್ಮಿಕ ಸಂಘಟನೆಗಳ ಜೊತೆಗಾಗಲೀ ಕನಿಷ್ಠ ಸಮಾಲೋಚನೆಯನ್ನೂ ನಡೆಸುತ್ತಿಲ್ಲ. ಈ ಹಿಂದೆ 2016ರಲ್ಲಿ ಕೇವಲ ಉಡುಪು ಉದ್ಯಮದಲ್ಲಿ ಮಾತ್ರ ಅಳವಡಿಸಲಾದ ನಿಗದಿತ ಅವಧಿಯ ಉದ್ಯೋಗಕರಾರು ಯೋಜನೆಯು ಒಟ್ಟಾರೆಯಾಗಿ ಉದ್ಯಮ ಸ್ನೇಹಿಯಾಗಿದ್ದು ಕಾರ್ಮಿಕರ ವ್ಯವಹಾರವನ್ನು ಮಾಲಕರು ತಮಗೆ ಬೇಕಾದಂತೆ ರೂಪಿಸಿಕೊಳ್ಳುವ ರೀತಿಯಲ್ಲಿ ಸಡಿಲವಾಗಿದೆ. ಈಗ ಆ ನೀತಿಯನ್ನು ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಲಾಗಿದೆ. ನಿಗದಿತ ಅವಧಿಯ ಉದ್ಯೋಗಕರಾರು ನಿಯಮಗಳ ಪ್ರಕಾರ ಕಾರ್ಮಿಕರನ್ನು ಕರಾರಿನ ಅವಧಿಯಲ್ಲೂ ಸಹ ಯಾವಾಗ ಬೇಕಾದರೂ ಕಿತ್ತೊಗೆಂಬಹುದು ಮತ್ತು ಅದಕ್ಕಾಗಿ ಮಾಲಕರು ಯಾವುದೇ ಸೂಚನೆಯನ್ನು ನೀಡಬೇಕಿಲ್ಲ. 1970ರಿಂದಾಚೆಗೆ ಬಹು ರಾಷ್ಟ್ರೀಯ ಕಂಪೆನಿಗಳನ್ನೂ ಒಳಗೊಂಡಂತೆ ಎಲ್ಲಾ ಉದ್ದಿಮೆಗಳು ಗುತ್ತಿಗೆ ಕಾರ್ಮಿಕ ಪದ್ಧತಿಯನ್ನೇ ಅಳವಡಿಸಿಕೊಳ್ಳುತ್ತಿರುವುದು ಕೂಡಾ ಕಾರ್ಮಿಕ ಸಂಘಟನೆಗಳಿಗೆ ದೊಡ್ಡ ಸವಾಲಾಗಿಯೇ ಉಳಿದಿದೆ.

 ಕಾರ್ಮಿಕ ಸಂಘಟನೆಗಳ ಅಸ್ತಿತ್ವಕ್ಕೇ ದೊಡ್ಡ ಅಪಾಯ ಎದುರಾಗಿರುವಾಗ ಮತ್ತು ಹೊಸ ಬಿಕ್ಕಟ್ಟುಗಳನ್ನೆದುರಿಸಲು ಬೇಕಾದ ಕಾರ್ಮಿಕ ಸಂಘಟನೆಗಳ ಸಾಮರ್ಥ್ಯಗಳು ಅತೀವ ಒತ್ತಡವನ್ನು ಅನುಭವಿಸುತ್ತಿರುವಾಗ, ಅವಕ್ಕೆ ದೇಶದ ರಾಜಕೀಯ ಪರಿಸ್ಥಿತಿಗಳನ್ನು ಹೊರತು ಪಡಿಸಿ ಹೇಗೆ ತಾನೇ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯ? ವಾಸ್ತವವಾಗಿ ಆರೆಸ್ಸೆಸ್ ಹಿನ್ನೆಲೆಯಿರುವ ಬಿಎಂಎಸ್ ಸಂಘಟನೆಯೂ ಸಹ ಈ ನಿಗದಿತ ಅವಧಿಯ ಗುತ್ತಿಗೆ ಪದ್ಧತಿಯನ್ನು ಮತ್ತು ಸರಕಾರವು 2017ರ ಕೂಲಿ ಸಂಹಿತೆ ಮಸೂದೆಯೊಳಗೆ ಹಲವಾರು ಕಾರ್ಮಿಕ ಸಂಬಂಧಿಶಾಸನಗಳನ್ನು ಸೇರಿಸಿದ್ದನ್ನು ಖಂಡಿಸಿದೆ. ಜೊತೆಗೆ, ಸರಕಾರವು ಬಹು ರಾಷ್ಟ್ರೀಯ ಕಂಪೆನಿಗಳ ಮೇಲೆ ಅವಲಂಬಿಸಿರುವುದನ್ನು ಖಂಡಿಸಿ ಈವರೆಗೆ ಅವು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿವೆ ಎಂಬ ಬಗ್ಗೆ ಒಂದು ಶ್ವೇತ ಪತ್ರವನ್ನು ಹೊರಡಿಸಬೇಕೆಂದೂ ಸಹ ಅದು ಆಗ್ರಹಿಸಿದೆ. ಈ ಹಿಂದೆಮೋದಿ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಬಿಎಂಎಸ್ ಸಹ ಬಹಿರಂಗವಾಗಿಯೇ ಖಂಡಿಸಿತ್ತು. ಆದರೆ ಬಿಎಂಎಸ್ ಸಂಘಟನೆಯು ದೇಶದ ಕಾರ್ಮಿಕರ ಭವಿಷ್ಯದ ಬಗೆಗಿನ ಸೂಕ್ಷ್ಮವಾದ ಸಂಗತಿಗಳ ಬಗ್ಗೆ ಇತರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ರಾಷ್ಟ್ರವ್ಯಾಪಿ ಪ್ರತಿಭಟನೆಗಳಲ್ಲಿ 2015ರ ಸೆಪ್ಟಂಬರ್ ನಂತರದಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿತು. ತನಗೆ ರಾಜಕೀಯ ಮಾಡುವುದರಲ್ಲಿ ನಂಬಿಕೆಯಿಲ್ಲದಿರುವುದರಿಂದ ತಾನು ಅಂಥಾ ಸಾರ್ವತ್ರಿಕ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲವೆಂದು ತನಗೆ ಅದಕ್ಕಿಂತ ಕಾರ್ಮಿಕರ ಕಲ್ಯಾಣದ ಬಗ್ಗೆ ಹೆಚ್ಚಿನ ಕಾಳಜಿಯಿದೆ ಎಂದು ಅದು ಹೇಳಿಕೊಳ್ಳುತ್ತದೆ. ಕಾರ್ಮಿಕ ಸಂಘಟನೆಗಳ ಜಂಟಿ ಒಕ್ಕೂಟಗಳ ವೇದಿಕೆಯನ್ನು ಸರಕಾರವು ಗಂಭೀರವಾಗಿ ತೆಗೆದುಕೊಳ್ಳುವಂತೆ ಮಾಡುವ ಮೂಲಕ ತ್ರಿಪಕ್ಷೀಯ ಮಾತುಕತೆಗಳನ್ನು ಗಂಭೀರವಾಗಿ ತೆಗೆದುಕೊಂಡು ಅರ್ಥಪೂರ್ಣ ಮಾತುಕತೆಗೆ ಮುಂದಾಗುವಂತೆ ಮಾಡಬೇಕಿರುವುದು ಇಂದುಸಂಘಟಿತ ಕಾರ್ಮಿಕ ವರ್ಗದ ಚಳವಳಿಯ ಮುಂದಿರುವ ಸವಾಲುಗಳಲ್ಲಿ ಒಂದಾಗಿದೆ. ಎನ್‌ಡಿಎ ಸರಕಾರವು ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ಮಾಡುವುದನ್ನು ಸದಾ ತಿರಸ್ಕರಿಸುತ್ತದೆ ಎಂಬುದು ಬಹುಪಾಲು ಕಾರ್ಮಿಕ ನಾಯಕರ ಅಭಿಪ್ರಾಯವಾಗಿದೆ. ಕಾರ್ಮಿಕ ಸುಧಾರಣೆಗಳು ಕಾರ್ಖಾನೆಗಳ ಮುಚ್ಚುವಿಕೆಗೆ ಮತ್ತು ಕಾರ್ಮಿಕರನ್ನು ಕಿತ್ತೊಗೆಯುವುದಕ್ಕೆ ಕಾರಣವಾಗುವುದು ಮಾತ್ರವಲ್ಲದೆ ಅದು ಪ್ರಜಾತಂತ್ರದ ಮೇಲಿನ ಪ್ರಹಾರವಾಗಿದೆ. ಅದನ್ನು ಜನರಿಗೆ ತಿಳಿಸುವ ಮೂಲಕ ಕಾರ್ಮಿಕರ ಹಿತಾಸಕ್ತಿಯನ್ನು ಸಾರ್ವಜನಿಕ ಹಿತಾಸಕ್ತಿಯಾಗುವಂತೆ ಮಾಡಬೇಕಾದ ಬೃಹತ್ತಾದ ಮತ್ತು ಸಂಕೀರ್ಣವಾದ ಹೊಣೆಗಾರಿಕೆ ಕಾರ್ಮಿಕ ಸಂಘಟನೆಗಳ ಮೇಲಿದೆ. ಇದನ್ನು ಸಾಧಿಸಲು ಪ್ರಗತಿಪರ ರಾಜಕೀಯ ಮತ್ತು ಸಾಮಾಜಿಕ ಚಳವಳಿಗಳನ್ನು ಒಳಗೊಳ್ಳಬೇಕಿದೆ. ತನ್ನನ್ನು ತಾನು ನಿರ್ಣಾಯಕ ಶಕ್ತಿಯಾಗಿ ರೂಪಿಸಿಕೊಳ್ಳದೇ ರಾಜಕೀಯದ ಜನರನ್ನು ಬಗ್ಗುಬಡಿಯಲು ಸಾಧ್ಯವಿಲ್ಲ. ಬಂದ್ ಎನ್ನುವುದು ಜನಸಾಮಾನ್ಯರಿಗೆ ಕಿರುಕುಳ ನೀಡುವ ಒಂದು ಭಾಗವಾಗಿಯಷ್ಟೇ ಉಳಿಯುತ್ತದೆ. ಸರಕಾರ ಇದಕ್ಕೆ ಸ್ಪಂದಿಸುವುದಿಲ್ಲ ಎಂದಮೇಲೆ ಬಂದ್ ಉದ್ದೇಶವೇನು ಎನ್ನುವ ಪ್ರಶ್ನೆಯೂ ಏಳಬಹುದು. ಕಾರ್ಮಿಕರು ಎದುರಿಸುತ್ತಿರುವ ಬಿಕ್ಕಟ್ಟನ್ನು ಮೊದಲು ಕಾರ್ಮಿಕರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾರ್ಮಿಕ ಸಂಘಟನೆಗಳು ಮಾಡಬೇಕು. ಆಗ ತನ್ನಷ್ಟಕ್ಕೇ ರಾಜಕೀಯ ನಾಯಕರಿಗೆ ಕಾರ್ಮಿಕ ಸಂಘಟನೆಗಳ ಬಲ ಅರ್ಥವಾಗಬಹುದು. ಯಾವಾಗ ಜನಸಾಮಾನ್ಯರು, ಕಾರ್ಮಿಕರು ಕಾರ್ಮಿಕ ಸಂಘಟನೆಗಳ ಜೊತೆಗೆ ಬಲವಾಗಿ ನಿಂತಿದ್ದಾರೆ ಎನ್ನುವುದು ರಾಜಕೀಯ ನಾಯಕರಿಗೆ ಅರ್ಥವಾಗುತ್ತದೆಯೋ ಆಗ, ಕಾರ್ಮಿಕರ ಬೇಡಿಕೆಗಳಿಗೆ ಸರಕಾರ ತಲೆ ಬಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News