ಕಿಟಕಿಗೂ ತೆರಿಗೆ, ಮಂಜುಗಡ್ಡೆಗೂ ತೆರಿಗೆ!: ಜಗತ್ತಿನಲ್ಲಿರುವ ಚಿತ್ರವಿಚಿತ್ರ ತೆರಿಗೆಗಳಿವು…

Update: 2019-01-08 11:18 GMT

ಜಗತ್ತಿನಲ್ಲಿ ಕೆಲವು ಅಸಹಜವೆನ್ನಿಸುವ ತೆರಿಗೆಗಳಿವೆ. ಇತಿಹಾಸದಲ್ಲಿ ಇಂತಹ ಚಿತ್ರವಿಚಿತ್ರ ತೆರಿಗೆಗಳ ಹಲವಾರು ಉಲ್ಲೇಖಗಳು ದೊರೆಯುತ್ತವೆ. ಇಂತಹ ಕೆಲವು ತೆರಿಗೆಗಳ ಕುರಿತು ಮಾಹಿತಿಯಿಲ್ಲಿದೆ.

ಸ್ವಿಝರ್ ಲ್ಯಾಂಡ್ ನಲ್ಲಿ ಶ್ವಾನ ತೆರಿಗೆ

ಸ್ವಿಝರ್ ಲ್ಯಾಂಡ್ ನಲ್ಲಿ ನಲ್ಲಿ ನಾಯಿಗಳನ್ನು ಸಾಕಲು ಬಯಸುವವರು ಸರಕಾರಕ್ಕೆ ತೆರಿಗೆಯನ್ನು ಪಾವತಿಸಬೇಕು. ವಾರ್ಷಿಕವಾಗಿ ಪಾವತಿಸಲಾಗುವ ಈ ಶ್ವಾನ ತೆರಿಗೆಯ ದರ ಪ್ರತಿ ಮುನ್ಸಿಪಾಲ್ಟಿಗೂ ಭಿನ್ನವಾಗಿದೆ.

ಇಂಗ್ಲೆಂಡ್‌ನಲ್ಲಿ ಕಿಟಕಿ ತೆರಿಗೆ

1696ರಲ್ಲಿ ಮೊದಲ ಬಾರಿಗೆ ಈ ತೆರಿಗೆಯನ್ನು ಹೇರಲಾಗಿದ್ದು, ಮನೆಯ ಕಿಟಕಿಗಳ ಸಂಖ್ಯೆಯ ಆಧಾರದಲ್ಲಿ ತೆರಿಗೆಯನ್ನು ವಸೂಲು ಮಾಡಲಾಗುತ್ತಿತ್ತು. ಮೂರನೇ ವಿಲಿಯಂ ದೊರೆಯ ಆಡಳಿತದಲ್ಲಿ ನಕಲಿ ನಾಣ್ಯಗಳ ತಯಾರಕರು ಅಸಲಿ ನಾಣ್ಯಗಳಲ್ಲಿಯ ಭಾಗಶಃ ಲೋಹವನ್ನು ಕದ್ದು ವಾಪಸ್ ಚಲಾವಣೆಗೆ ಬಿಡುತ್ತಿದ್ದರಿಂದ ಉಂಟಾದ ನಷ್ಟವನ್ನ ಸರಿದೂಗಿಸಲು ಈ ತೆರಿಗೆಯನ್ನು ಹೇರಲಾಗಿತ್ತು. ಆದರೆ ದೇಶವ್ಯಾಪಿ ಪ್ರತಿಭಟನೆಗಳ ಬಳಿಕ 1851ರಲ್ಲಿ ಈ ತೆರಿಗೆಯನ್ನು ರದ್ದುಮಾಡಲಾಗಿತ್ತು.

ಉತ್ತರ ಪ್ರದೇಶದಲ್ಲಿ ಗೋ ಸೆಸ್

ಉತ್ತರ ಪ್ರದೇಶ ಸರಕಾರವು ರಾಜ್ಯಾದ್ಯಂತ ಗೋಶಾಲೆಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಇದಕ್ಕೆ ವೆಚ್ಚವಾಗುವ ಹಣವನ್ನು ಸಾರ್ವಜನಿಕರು ಪಾವತಿಸಬೇಕಿದೆ. ಅಬಕಾರಿ ಮತ್ತು ಇತರ ಇಲಾಖೆಗಳ ಮೇಲೆ ಗೋ ಕಲ್ಯಾಣ ಸೆಸ್ ವಿಧಿಸುವುದಾಗಿ ರಾಜ್ಯ ಸರಕಾರವು ಪ್ರಕಟಿಸಿದೆ.

ನ್ಯೂಯಾರ್ಕ್‌ನಲ್ಲಿ ಬ್ಯಾಗಲ್ ತೆರಿಗೆ

ಅಮೆರಿಕದಲ್ಲಿ ಒಂದು ವಿಧದ, ರಿಂಗ್ ಆಕಾರದಲ್ಲಿರುವ ಗಟ್ಟಿಯಾದ ‘ಬ್ರೆಡ್ ಬ್ಯಾಗಲ್’ ಜನಪ್ರಿಯ ತಿನಿಸಾಗಿದೆ. ನ್ಯೂಯಾರ್ಕ್‌ನಲ್ಲಿ ಇಡಿಯ ಬ್ಯಾಗೆಲ್ ಮಾರಾಟದ ಮೇಲೆ ಯಾವುದೇ ತೆರಿಗೆ ಇಲ್ಲ. ಆದರೆ ಸ್ಲೈಸ್‌ಗಳನ್ನಾಗಿಸಿದ ಅಥವಾ ಕ್ರೀಮ್ ಚೀಸ್ ಯಾ ಇತರ ಟಾಪಿಂಗ್‌ ಗಳೊಂದಿಗೆ ಸಿದ್ಧ ಬ್ಯಾಗಲ್ ಮೇಲೆ ತೆರಿಗೆಯನ್ನು ಹೇರಲಾಗಿದೆ. ಅಲ್ಲದೆ ಸಿದ್ಧ ಅಥವಾ ಸಿದ್ಧವಲ್ಲದ ಬ್ಯಾಗಲ್‌ ನ್ನು ಅಂಗಡಿಯಲ್ಲಿಯೇ ತಿಂದರೆ ಅದಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಅರಿರೆನಾದಲ್ಲಿ ಮಂಜುಗಡ್ಡೆಗೆ ತೆರಿಗೆ

ಅಮೆರಿಕದ ಅರಿರೆನಾ ರಾಜ್ಯದಲ್ಲಿ ಮಂಜುಗಡ್ಡೆಗೆ ತೆರಿಗೆಯನ್ನು ವಿಧಿಸಲಾಗುತ್ತದೆ. ಆದರೆ ಇಲ್ಲಿ ಐಸ್ ಬ್ಲಾಕ್ ಗಳು ಮತ್ತು ಕ್ಯೂಬ್‌ಗಳಿಗೆ ಭಿನ್ನತೆಯಿದೆ. ಐಸ್ ಕ್ಯೂಬ್‌ ಗಳನ್ನು ಮಿಶ್ರ ಪಾನೀಯಗಳಲ್ಲಿ ಬಳಸಲಾಗುವುದರಿಂದ ಅದನ್ನು ಆಹಾರವೆಂದು ಪರಿಗಣಿಸಿದ್ದು, ತೆರಿಗೆಯಿಂದ ವಿನಾಯಿತಿ ಹೊಂದಿದೆ. ಆದರೆ ಐಸ್ ಬ್ಲಾಕ್‌ಗಳಿಗೆ ಮಾರಾಟ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಕಾನ್ಸಾಸ್‌ ನಲ್ಲಿ ಹಗ್ಗದಿಂದ ಬಂಧಿಸಿದ ಏರ್ ಬಲೂನ್‌ಗಳಿಗೆ ತೆರಿಗೆ

ಇದು ನಿಜಕ್ಕೂ ವಿಲಕ್ಷಣ ತೆರಿಗೆಯಾಗಿದೆ. ಕಾನ್ಸಾಸ್‌ನಲ್ಲಿ ಹಗ್ಗಗಳಿಂದ ನೆಲದಲ್ಲಿಯ ಆಧಾರಗಳಿಗೆ ಕಟ್ಟಿರದ ಏರ್ ಬಲೂನ್‌ಗಳನ್ನು ಸಾರಿಗೆಯ ವಿಧಾನವೆಂದು ಮತ್ತು ಆಧಾರಗಳಿಗೆ ಕಟ್ಟಲ್ಪಟ್ಟ ಏರ್ ಬಲೂನುಗಳನ್ನು ಮೋಜಿನ ಸಾಧನ ಎಂದು ಪರಿಗಣಿಸಲಾಗಿದೆ. ಮೋಜಿನ ಸವಾರಿಗಳು ತೆರಿಗೆಗೊಳಪಡುವುದರಿಂದ ಎರಡನೇ ವಿಧದ ಏರ್‌ ಬಲೂನ್‌ಗಳಿಗೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News