ನ್ಯಾಶನಲ್ ಹೆರಾಲ್ಡ್ ಪ್ರಕರಣ ಜನವರಿ 16ಕ್ಕೆ ವಿಚಾರಣೆ: ದಿಲ್ಲಿ ಉಚ್ಚ ನ್ಯಾಯಾಲಯ

Update: 2019-01-09 15:09 GMT

ಹೊಸದಿಲ್ಲಿ, ಜ. 9: ಜನವರಿ 15ರಂದು ನ್ಯಾಯವಾದಿಗಳು ಲಭ್ಯವಿಲ್ಲದಿರುವುದರಿಂದ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ನ್ಯಾಶನಲ್ ಹೆರಾಲ್ಡ್ ದಿನಪತ್ರಿಕೆಯ ಪ್ರಕಾಶಕರಾದ ಅಸೋಸಿಯೇಟ್ ಜರ್ನಲ್ ಲಿಮಿಟೆಡ್ ಸಲ್ಲಿಸಿದ ಮನವಿಯನ್ನು ಜನವರಿ 16ರಂದು ವಿಚಾರಣೆ ನಡೆಸಲಾಗುವುದು ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ಹೇಳಿದೆ.

ಇಲ್ಲಿರುವ ನ್ಯಾಶನಲ್ ಹೆರಾಲ್ಡ್ ಕಚೇರಿ ತೆರವುಗೊಳಿ ಸುವಂತೆ ಏಕಸದಸ್ಯ ಪೀಠ ನೀಡಿದ ತೀರ್ಪು ಪ್ರಶ್ನಿಸಿ ಅಸೋಸಿಯೇಟ್ ಜರ್ನಲ್ ಲಿಮಿಟೆಡ್ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

ಪ್ರಕರಣದಲ್ಲಿ ವಾದ ಮಂಡಿಸುತ್ತಿರುವ ಕೇಂದ್ರ ಸರಕಾರದ ಪರ ಹಿರಿಯ ನ್ಯಾಯವಾದಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಅಸೋಸಿಯೇಟ್ ಜರ್ನಲ್ ಲಿಮಿಟೆಡ್ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಜನವರಿ 15ರಂದು ಲಭ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು.

ಎರಡು ಕಡೆಯ ವಕೀಲರು ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಮೂರ್ತಿ ವಿ.ಕೆ. ರಾವ್ ಅವರಲ್ಲಿ ನ್ಯಾಯವಾದಿಗಳು ಲಭ್ಯವಿಲ್ಲದೇ ಇರುವುದರಿಂದ ಪ್ರಕರಣವನ್ನು ಜನವರಿ 16ಕ್ಕೆ ನಿಗದಿಪಡಿಸುವಂತೆ ಕೋರಿತು.

ಎರಡು ಕಡೆಯವರ ಒಪ್ಪಿಗೆ ಪಡೆದು ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜನವರಿ 16ಕ್ಕೆ ನಿಗದಿಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News