ಕಪ್ಪತಗುಡ್ಡ ವನ್ಯಜೀವಿ ಸಂರಕ್ಷಿತ ಪ್ರದೇಶ: ಸತೀಶ್ ಜಾರಕಿಹೊಳಿ

Update: 2019-01-10 13:58 GMT

ಬೆಂಗಳೂರು, ಜ. 10: ಗದಗ ಜಿಲ್ಲೆ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಿತ ಪ್ರದೇಶವೆಂದು ಈಗಾಗಲೇ ಘೋಷಿಸಲಾಗಿದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಗದಗ ಜಿಲ್ಲೆಯ ಕಪ್ಪತಗುಡ್ಡ ಅರಣ್ಯ ಪ್ರದೇಶ, ತುಮಕೂರು ಜಿಲ್ಲೆಯ ಬಕ್ಕಾಪಟ್ಟಣ ಮೀಸಲು ಅರಣ್ಯ ಪ್ರದೇಶ ಮತ್ತು ಅದಕ್ಕೆ ಹೊಂದಿಕೊಂಡಿರುವ 40 ಸಾವಿರ ಎಕರೆ ಭೂಮಿಯನ್ನು ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ ಎಂದರು.

ಕಾವೇರಿ ಮತ್ತು ಮಲೆಮಹದೇಶ್ವರ ವನ್ಯಜೀವಿ ಧಾಮಗಳನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಬುಕ್ಕಾಪಟ್ಟಣ ಮೀಸಲು ಪ್ರದೇಶವನ್ನು ಮೀಸಲು ಅರಣ್ಯವೆಂದು 220 ಕಿ.ಮೀ.ವ್ಯಾಪ್ತಿಯನ್ನು ವನ್ಯಧಾಮವೆಂದು ಮತ್ತು ಕೋಲಾರದ ಮೀಸಲು ಕಾಮುಸಮುದ್ರ ಎಂಬ ಮೀಸಲು ಅರಣ್ಯ ಭೂಮಿಯನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಲಾಗಿದೆ ಎಂದರು.

ಶರಾವತಿ ಕಣಿವೆಯಲ್ಲಿನ ಈಗಿರುವ 400 ಚದರ ಕಿ.ಮೀ.ಯಿಂದ 632 ಚದರ ಕಿ.ಮೀ.ಹೆಚ್ಚಳ ಮಾಡಲಾಗಿದೆ. ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಕೋಟೆಯಲ್ಲಿ ಕರಡಿಧಾಮವನ್ನು 4,500 ಚದರ ಕಿ.ಮೀ.ಯಿಂದ 15 ಸಾವಿರ ಹೆಕ್ಟೆರ್‌ಗೆ ವಿಸ್ತರಿಸಲಾಗಿದೆ.

ಹುಬ್ಬಳ್ಳಿ-ಆಂಕೋಲ ನಡುವಿನ ರೈಲು ಮಾರ್ಗ ನಿರ್ಮಾಣಕ್ಕೆ ಸುಮಾರು 535.65 ಹೆಕ್ಟೆರ್ ಅರಣ್ಯ ಭೂಮಿ ಮಂಜೂರು ಮಾಡುವ ನಿರ್ಣಯ ಕೈಗೊಳ್ಳುವುದಕ್ಕೆ ರಾಜ್ಯ ವನ್ಯಜೀವಿ ಮಂಡಳಿಯ ಸಭೆ ನಿರಾಕರಿಸಿದೆ. ಈ ಯೋಜನೆಯ ರೈಲು ಮಾರ್ಗ ಹುಲಿ ಸಂರಕ್ಷಿತ ಪ್ರದೇಶ ಮತ್ತು ಆನೆ ಕಾರಿಡಾರ್ ಮೂಲಕ ಹಾದು ಹೋಗಲಿದೆ.

ಯೋಜನೆ ಪ್ರಾರಂಭವಾದರೆ ಅವುಗಳ ಜೀವಕ್ಕೆ ಕುತ್ತುಂಟಾಗುತ್ತದೆ ಎಂದು ಪರಿಸರ ಸಂಘಟನೆಗಳು, ಸಾರ್ವಜನಿಕರು, ತಜ್ಞರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಯೋಜನೆಗಾಗಿ ಸುಮಾರು 2 ಲಕ್ಷ ಮರಗಳನ್ನು ಕಡಿಯಬೇಕಾಗಿದ್ದು, ಈ ಭಾಗದ ಪರಿಸರಕ್ಕೆ ದೊಡ್ಡ ಮಟ್ಟದ ಹಾನಿಯಾಗಲಿದೆ ಎಂದು ವಿರೋಧ ವ್ಯಕ್ತವಾಗುತ್ತಿದ ಎಂದು ಸತೀಶ್ ಜಾರಕಿಹೊಳಿ ಇದೇ ವೇಳೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News