×
Ad

ಶೇ. 10ರಷ್ಟಿರುವ ವಾಲ್ಮೀಕಿ ಜನಾಂಗಕ್ಕೆ ಶೆ. 3ರಷ್ಟು ಮೀಸಲಾತಿ, ಅನ್ಯಾಯ

Update: 2019-01-10 20:52 IST

ಬೆಂಗಳೂರು, ಜ.10: ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಶೇ.7.5ಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ವಾಲ್ಮೀಕಿನಾಯಕ ಸ್ವಾಭಿಮಾನಿ ಚಳುವಳಿಯು ನಗರದ ಪುರಭವನ ಮುಂಭಾಗದಿಂದ ಸ್ವಾತಂತ್ರ ಉದ್ಯಾನದವರೆಗೆ ಪ್ರತಿಭಟನಾ ಜಾಥಾ ಹಮ್ಮಿಕೊಂಡಿತ್ತು. ಈ ವೇಳೆ ವಾಲ್ಮೀಕಿ ನಾಯಕ ಸ್ವಾಭಿಮಾನಿ ಚಳುವಳಿಯ ರಾಜ್ಯಾಧ್ಯಕ್ಷ ಚಳುವಳಿ ರಾಜಣ್ಣ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಪಂಗಡವು ಶೇ.10ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದು, ಕೇವಲ ಶೇ.3ರಷ್ಟು ಮಾತ್ರ ಮೀಸಲಾತಿ ಪಡೆಯುವ ಮೂಲಕ ಸಾಮಾಜಿಕ ಶೋಷಣೆ ಅನುಭವಿಸುತ್ತಿದೆ ಎಂದು ವಿಷಾದಿಸಿದರು.

ಪರಿಶಿಷ್ಟ ಪಂಗಡಕ್ಕೆ ಸಿಗುತ್ತಿರುವ ಶೇ.3ರಷ್ಟು ಮೀಸಲಾತಿಯಲ್ಲಿ ಕೆಲ ಬಲಾಢ್ಯರು ಸುಳ್ಳು ಪ್ರಮಾಣ ಪತ್ರ, ಹಣ, ಅಧಿಕಾರದ ಬಲದಿಂದ ಮೀಸಲಾತಿಯ ಸೌಲಭ್ಯವನ್ನು ಕಬಳಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆೆ ದೂರು ನೀಡಿದ್ದರೂ ಪ್ರಯೋಜವಾಗುತ್ತಿಲ್ಲ. ಹೀಗಾಗಿ ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇವತ್ತಿನ ಆಧುನಿಕ ಸಮಾಜದಲ್ಲೂ ಪರಿಶಿಷ್ಟ ಪಂಗಡದ ಸಮುದಾಯ ವಾಸಿಸಲು ಯೋಗ್ಯವಾದ ಮನೆಯಿಲ್ಲದೆ ಬೀದಿಯಲ್ಲಿ, ಗುಡಿಸಲುಗಳಲ್ಲಿ ಮಲಗಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಇಂತವರಿಗೆ ಗಿರಿಜನ ಉಪ ವಿಶೇಷ ಯೋಜನೆಯಡಿಯಲ್ಲಿ ನಿವೇಶನ ಹಾಗೂ ಭೂರಹಿತ ಕೃಷಿ ಕಾರ್ಮಿಕರಿಗೆ ತಲಾ ಎರಡು ಎಕರೆ ಜಮೀನನ್ನು ನೀಡಬೇಕೆಂದು ಅವರು ಪಟ್ಟು ಹಿಡಿದರು.

ಪ್ರತಿಭಟನೆಯಲ್ಲಿ ವಾಲ್ಮೀಕಿನಾಯಕ ಸ್ವಾಭಿಮಾನಿ ಚಳುವಳಿಯ ನಾಯಕರಾದ ನರಸಿಂಹಮೂರ್ತಿ, ಲಕ್ಷ್ಮೀಪತಿ, ಹನುಮೇಶ್, ಪ್ರಶಾಂತ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News