ಬೆಂಗಳೂರು ಮೆಟ್ರೋ ರೈಲು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ

Update: 2019-01-11 12:26 GMT

ಬೆಂಗಳೂರು, ಜ.11: ನಮ್ಮ ಮೆಟ್ರೋ ರೈಲು ಹಳಿಗೆ ಜಿಗಿದು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ.

ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವೇಣು(25) ಎಂಬಾತ ಆತ್ಮಹತ್ಯೆಗೆ ಪ್ರಯತ್ನಿಸಿರುವ ಯುವಕನಾಗಿದ್ದು, ಈತ ಟೈಲರ್ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಗುರುತಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಲಾಲ್‌ಬಾಗ್ ಕಡೆಯಿಂದ ಮೆಜೆಸ್ಟಿಕ್ ಮಾರ್ಗವಾಗಿ ಮೆಟ್ರೋ ರೈಲು ಬರುತ್ತಿತ್ತು. ಮಾರ್ಗ ಮಧ್ಯೆ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಬಳಿ ರೈಲು ನಿಲುಗಡೆಗಾಗಿ ನಿಧಾನವಾಗಿ ಚಲಿಸುತ್ತಾ ಬರುತ್ತಿದ್ದಂತೆ, ಏಕಾಏಕಿ ವೇಣು ಓಡಿಬಂದು ಆತ್ಮಹತ್ಯೆ ಮಾಡಿಕೊಳ್ಳಲು ಹಳಿ ಮೇಲೆ ಜಿಗಿದಿದ್ದಾನೆ ಎನ್ನಲಾಗಿದೆ.

ತಕ್ಷಣ ರೈಲು ಚಾಲಕರು ಬ್ರೇಕ್ ಹಾಕಿದರಾದರೂ ಕೊಂಚ ದೂರ ಕ್ರಮಿಸಿದೆ. ಕೂಡಲೇ ಮೆಟ್ರೋ ರೈಲು ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ರೈಲನ್ನು ಹಿಂದಕ್ಕೆ ತಳ್ಳಿ ಈತನನ್ನು ರಕ್ಷಿಸಿದ್ದು, ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದು ಹೊಸೂರು ರಸ್ತೆಯಲ್ಲಿರುವ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ವಿವಿಪುರಂ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಸಿಸಿಟಿವಿಯನ್ನು ಪರಿಶೀಲಿಸಿದಾಗ ರೈಲು ಬರುತ್ತಿರುವುದನ್ನೇ ಗಮನಿಸಿ ಈತ ಹಳಿಗೆ ಹಾರಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ವಿಚಾರಣೆಗೊಳಪಡಿಸಿದಾಗ ತನ್ನ ಹೆಸರು ವೇಣು, ಟೈಲರ್ ವೃತ್ತಿ ಮಾಡುತ್ತಿದ್ದ ಎನ್ನಲಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News