ನಟ-ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ಪ್ರಕರಣ: ವಿಚಾರಣೆಗೆ ಹಾಜರಾದ ಯಶ್

Update: 2019-01-11 13:05 GMT

ಬೆಂಗಳೂರು, ಜ.11: ಕನ್ನಡ ಚಿತ್ರರಂಗದ ನಟ, ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಪ್ರಕರಣ ಸಂಬಂಧ ನಟ ಯಶ್, ಅವರ ತಾಯಿ ಪುಪ್ಪಲತಾ ವಿಚಾರಣೆಗೆ ಹಾಜರಾದರು.

ನೋಟಿಸ್ ಹಿನ್ನಲೆ ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕೇಂದ್ರ ಕಚೇರಿಗೆ ಆಗಮಿಸಿದ ಅವರು, 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿ, ದಾಖಲೆ ಪತ್ರಗಳನ್ನು ಸಲ್ಲಿಸಿದರು ಎಂದು ತಿಳಿದುಬಂದಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್, ಒಂದು ಇಲಾಖೆಯಿಂದ ದಾಳಿ ಆದ ಮೇಲೆ ಅಧಿಕಾರಿಗಳು ನಮ್ಮನ್ನು ಎಲ್ಲ ರೀತಿಯಲ್ಲೂ ವಿಚಾರಣೆ ಮಾಡುತ್ತಾರೆ. ನಾನು ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಿದ್ದೇನೆ ಎಂದರು.

ನಾವು ಸಮಾಜದಲ್ಲಿ ಏನೇ ಮಾಡಿದರೂ ಅದು ನಿಮಗೆ ಗೊತ್ತಾಗುತ್ತದೆ. 7-8 ಜನರು ಒಟ್ಟಿಗೆ ಸೇರಿ ಕೆಲಸ ಮಾಡಿದಾಗ, ಅವರ ವ್ಯವಹಾರ ಏನು, ಅವರ ಜೊತೆ ನಿಮ್ಮ ವ್ಯವಹಾರ ಏನು ಎಂದೆಲ್ಲಾ ಕೆಲವು ಪ್ರಶ್ನೆಗಳು ಇರುತ್ತವೆ. ಇದೊಂದು ಪ್ರಕ್ರಿಯೆಯಾಗಿದ್ದು, ಇದನ್ನು ಅರ್ಥಮಾಡಿಕೊಂಡು ಗೌರವದಿಂದ ಮಾಡಿಕೊಂಡು ಹೋಗೋಣ ಎಂದು ತಿಳಿಸಿದರು.

ಆಡಿಟರ್ ಮನೆಯ ಮೇಲೆ ಅಲ್ಲ, ಅವರ ಕಚೇರಿಯ ಮೇಲೆ ಐಟಿ ದಾಳಿ ಆಗಿದೆ. ಅದು ಬಿಟ್ಟು ಬೇರೆ ನನಗೆ ಗೊತ್ತಿಲ್ಲ. ನಾನು ಜನವರಿ 8-9ರಂದು ನನ್ನ ಹುಟ್ಟುಹಬ್ಬವಿದೆ ಅಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ, ಜ.10 ರಂದು ಬರುತ್ತೇನೆ ಎಂದು ಕೇಳಿದ್ದೆ, ಅದಕ್ಕೆ ಅವರು 11 ರಂದು ಬನ್ನಿ ಎಂದು ಸೂಚಿಸಿದ್ದರು. ಆದ್ದರಿಂದ ಇಂದು ವಿಚಾರಣೆಗೆ ಹಾಜರಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಬಹು ಕೋಟಿ ಸಾಲ ಇಲ್ಲ: ನನಗೆ 40 ಕೋಟಿ ಸಾಲ ಯಾಕೆ ಕೊಡುತ್ತಾರೆ. ನನ್ನ ಪ್ರಕಾರ ನನಗೆ 15 ರಿಂದ 16 ಕೋಟಿ ಸಾಲವಿದೆ. 15, 16 ಕೋಟಿ ಸಾಲ ಬೇಕಾದರೆ, ತೆರಿಗೆ ಎಷ್ಟಿರಬೇಕು. ತೆರಿಗೆ ಕಟ್ಟಿಲ್ಲ ಅಂದರೆ ಯಾರಾದರೂ ಸಾಲ ನೀಡುತ್ತಾರಾ ಎನ್ನುವುದು ಒಬ್ಬ ಸಾಮಾನ್ಯ ವ್ಯಕ್ತಿಗೆ ಗೊತ್ತಾದರೆ ಸಾಕು ಎಂದ ಅವರು, ಊಹಾಪೋಹಗಳಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದರು.

ಜಯಣ್ಣ ವಿಚಾರಣೆ: ಐಟಿ ದಾಳಿ ನಡೆದ ವಿಚಾರವಾಗಿ ನಿರ್ಮಾಪಕ ಜಯಣ್ಣ ವಿಚಾರಣೆಗೆ ಹಾಜರಾದರು. ದಾಳಿ ವೇಳೆ ಅಧಿಕಾರಿಗಳು ಹಲವು ದಾಖಲೆಗಳನ್ನ ವಶಕ್ಕೆ ಪಡೆದಿದ್ದ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News