"ಇಐಬಿಯೊಂದಿಗೆ 200 ಮಿಲಿಯನ್ ಯುರೋ ಒಪ್ಪಂದಕ್ಕೆ ಸಹಿ"

Update: 2019-01-11 15:25 GMT

ಬೆಂಗಳೂರು, ಜ.11: ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-2ರ ರೀಚ್-6ಕ್ಕೆ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್(ಇಐಬಿ) ಜೊತೆ 200 ಮಿಲಿಯನ್ ಯುರೋ ಒಪ್ಪಂದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಸಹಿ ಹಾಕಿದರು.

ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ನೀಡುತ್ತಿರುವ ನೆರವಿಗೆ ಸರಕಾರ ಆಭಾರಿಯಾಗಿದೆ ಎಂದರು. ಬೆಂಗಳೂರು ನಗರದಲ್ಲಿ 11 ದಶಲಕ್ಷ(1.10 ಕೋಟಿ) ಜನಸಂಖ್ಯೆ ಇದ್ದು, ಪರಿಸರ ಮಾಲಿನ್ಯಕ್ಕೆ ನೀಡುತ್ತಿರುವ ಕೊಡುಗೆಯನ್ನು ಹಾಗೂ ವಾಹನ ದಟ್ಟಣೆ ಕಡಿಮೆ ಮಾಡುವ, ಹಾಗೂ ಜನಸಾಮಾನ್ಯರ ಜೀವನಮಟ್ಟ ಉತ್ತಮಪಡಿಸುವ ನಿಟ್ಟಿನಲ್ಲಿ ಮೆಟ್ರೋ ಯೋಜನೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಮೆಟ್ರೋ 2ನೇ ಹಂತದ ಯೋಜನೆಯ ಅಂದಾಜು ಮೊತ್ತ 26,405 ಕೋಟಿ ರೂ.ಗಳಾಗಿದ್ದು, ಈ ಪೈಕಿ 12,141 ಕೋಟಿ ರೂ.ಗಳು ಸಾಲದ ಅಗತ್ಯವಿದೆ. ಇಐಬಿ 500 ಮಿಲಿಯನ್ ಯುರೋಗಳನ್ನು ಅಂದರೆ ಸುಮಾರು 3800 ಕೋಟಿ ರೂ.ಗಳ ನೆರವನ್ನು ಒದಗಿಸುತ್ತಿರುವುದು ಅಭಿನಂದನೀಯ ಎಂದು ಕುಮಾರಸ್ವಾಮಿ ತಿಳಿಸಿದರು.

ಉಪ ಮುಖ್ಯಮಂತ್ರಿ ಪರಮೇಶ್ವರ್ ಮಾತನಾಡಿ, ಗೊಟ್ಟಿಗೆರೆಯಿಂದ ನಾಗವಾರವರೆಗೆ ರೀಚ್-6 ಯೋಜನೆಗೆ ಇಐಬಿ ಅವರು 500 ಮಿಲಿಯನ್ ಯುರೋ ಅನ್ನು ಸಾಲವಾಗಿ ನೀಡಲು ಒಪ್ಪಿದ್ದಾರೆ. ಏಷಿಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್(ಎಐಐಬಿ) 300 ಮಿಲಿಯನ್ ಯುರೋ ಸಾಲ ನೀಡಲಿದ್ದು, ಒಟ್ಟಾರೆ ಈ ಯೋಜನೆಗೆ 800 ಯುರೋ ಮಿಲಿಯನ್ ಸಾಲ ನೀಡಲು ಮುಂದೆ ಬಂದಿದ್ದಾರೆ ಎಂದರು.

ನಮ್ಮ ಸರಕಾರ ಆರ್ಥಿಕವಾಗಿ ಸುಭದ್ರವಾಗಿರುವುದರಿಂದ ಇತರೆ ಬ್ಯಾಂಕ್‌ಗಳು ಸಾಲ ನೀಡಲು ಆಸಕ್ತಿ ತೋರುತ್ತಿವೆ. ಕೆಲವರು ಸರಕಾರದ ಬಗ್ಗೆ ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ನಮ್ಮ ಸರಕಾರ ಆರ್ಥಿಕ ಭದ್ರತೆ ಸಾಧಿಸಿರುವುದರಿಂದ ಇತರೆ ಸಂಸ್ಥೆಗಳು ಸಾಲ ನೀಡಲು ಮುಂದೆ ಬಂದಿವೆ ಎಂದು ಪರಮೇಶ್ವರ್ ತಿಳಿಸಿದರು.

ಈ ಸಂದರ್ಭದಲ್ಲಿ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ನಿರ್ದೇಶಕಿ ಮರಿಯಾ, ಉಪನಿರ್ದೇಶಕಿ ಸುನೀತಾ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News