ಎನ್‌ಡಿಆರ್‌ಎಫ್ ಹಣ ಬಿಡುಗಡೆ: ಕೇಂದ್ರ ಗೃಹ ಸಚಿವರಿಗೆ ಆರ್.ವಿ.ದೇಶಪಾಂಡೆ ಮನವಿ

Update: 2019-01-11 15:29 GMT

ಬೆಂಗಳೂರು, ಜ.11: ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರಕಾರವು ಕೂಡಲೇ ಮುಂಗಾರು ಹಂಗಾಮಿಗೆ ಅನ್ವಯವಾಗುವ ಎನ್‌ಡಿಆರ್‌ಎಫ್ ಹಣವನ್ನು ಮತ್ತು ಎಸ್‌ಡಿಆರ್‌ಎಫ್‌ನ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಬೇಕೆಂದು ಕೋರಿ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿಕೊಂಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಕೇಂದ್ರಕ್ಕೆ ಪತ್ರ ಬರೆದಿರುವ ಅವರು, ‘ಈ ವರ್ಷದ ಮುಂಗಾರು ಹಂಗಾಮಿನಲ್ಲಿ ರಾಜ್ಯದ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದಾದ ನಂತರ ಹಿಂಗಾರು ಮಳೆ ಕೂಡ ಕೈಕೊಟ್ಟು, ಬೆಳೆಗಳೆಲ್ಲ ಒಣಗಿಹೋಗಿವೆ. ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ 176 ತಾಲೂಕುಗಳ ಪೈಕಿ 156 ತಾಲೂಕುಗಳನ್ನು ಹಿಂಗಾರು ಅವಧಿಯಲ್ಲಿ ಬರಪೀಡಿತ ಎಂದು ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯದ ಮುಂಗಾರು ಹಂಗಾಮಿನ ಬರಪರಿಸ್ಥಿತಿ ಕುರಿತು ವಿವರಿಸಿ, ಕೇಂದ್ರದಿಂದ 2,434 ಕೋಟಿರೂ. ನೆರವು ಕೋರಿ 2018ರ ಅ.29ರಂದು ಮನವಿ ಸಲ್ಲಿಸಿರುವುದನ್ನು ಪತ್ರದಲ್ಲಿ ದೇಶಪಾಂಡೆ ಉಲ್ಲೇಖಿಸಿದ್ದಾರೆ.

ಕೇಂದ್ರದ ಅಂತರ ಸಚಿವಾಲಯ ತಂಡ 2018ರ ನ.17ರಿಂದ 19ರವರೆಗೆ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿದೆ. ಈ ತಂಡವು ಸಲ್ಲಿಸಿರುವ ವರದಿಯನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪಸಮಿತಿಯು ಪರಿಗಣಿಸಿದ್ದು, ಮುಂದಿನ ಕ್ರಮಕ್ಕಾಗಿ ಗೃಹಸಚಿವಾಲಯದ ಉನ್ನತಮಟ್ಟದ ಸಮಿತಿಗೆ ಶಿಫಾರಸು ಮಾಡಿರುವುದಾಗಿ ತಿಳಿದುಬಂದಿದೆ ಎಂದು ದೇಶಪಾಂಡೆ ವಿವರಿಸಿದ್ದಾರೆ.

‘ಬರಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸರಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ, ಪರಿಸ್ಥಿತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಭಾಯಿಸಲು ಕೇಂದ್ರದ ನೆರವು ಅಗತ್ಯವಾಗಿದೆ ಎಂದು ಅವರು ಮನವಿ ಮಾಡಿದ್ದಾರೆ. ಆದುದರಿಂದ, ತಾವು ಈ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಮುಂಗಾರು ಹಂಗಾಮಿನ ಬರದ ಬಾಬ್ತನ್ನು ಆದಷ್ಟು ಬೇಗನೇ ರಾಜ್ಯಕ್ಕೆ ಹಣ ಬಿಡುಗಡೆ ಮಾಡಬೇಕು. ಜೊತೆಗೆ ಎಸ್‌ಡಿಆರ್‌ಎಫ್ ನಿಧಿಯಿಂದ ರಾಜ್ಯಕ್ಕೆ ಬರಬೇಕಾದ ಎರಡನೇ ಕಂತಿನ ಹಣವನ್ನೂ ಪೂರೈಸಬೇಕು ಎಂದು ದೇಶಪಾಂಡೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News