ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಆರೋಪ: ಶಾಸಕ ನಾಗೇಂದ್ರ ಮನವಿ ತಿರಸ್ಕಾರ

Update: 2019-01-11 15:37 GMT

ಬೆಂಗಳೂರು, ಜ.11: ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಅರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೂಡ್ಲಿಗಿ ಶಾಸಕ ನಾಗೇಂದ್ರ ಅವರು ಶುಕ್ರವಾರ ಕೋರ್ಟ್‌ಗೆ ಹಾಜರಾದರು.

 ಪ್ರಕರಣದ ವಿಚಾರಣೆ ನಡೆಸುತ್ತಿರುವ ಇಲ್ಲಿನ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ಗುರುವಾರ ತಮ್ಮ ವಿರುದ್ಧ ಜಾರಿಯಾಗಿದ್ದ ಜಾಮೀನು ರಹಿತ ವಾರಂಟ್ ಹಿಂಪಡೆಯುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದೇ ವೇಳೆ ಇದೇ ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಸ್ವಸ್ತಿಕ್ ನಾಗರಾಜ್ ಮತ್ತು ಶಾಸಕ ಆನಂದ ಸಿಂಗ್ ವಿರುದ್ಧ ಜಾಮೀನು ರಹಿತ ವಾರಂಟ್ ಮುಂದುವರಿದಿದೆ.

ವಿಚಾರಣೆ ವೇಳೆ ನಾಗೇಂದ್ರ, ನಾನೊಬ್ಬ ಜನಪ್ರತಿನಿಧಿ. ಹೀಗಾಗಿ ಕ್ಷೇತ್ರದಲ್ಲಿ ಕೆಲಸದ ಒತ್ತಡ ಇದ್ದ ಕಾರಣ ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ತಿಳಿಸಿದರು. ಇದೇ ವೇಳೆ ನಾಗೇಂದ್ರ ಪರ ವಕೀಲ ಎಚ್.ಎಂ ಫಜಲ್, ಅರ್ಜಿದಾರರು ವಿಚಾರಣೆಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದರು.

ಕಡೇ ಪಕ್ಷ ವಾರದಲ್ಲಿ ಒಂದು ದಿನ ಹಾಜರಾಗುವುದಕ್ಕಾದರೂ ಅವಕಾಶ ನೀಡಬೇಕು ಎಂದು ಮೌಖಿಕ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ಬಿ.ವಿ.ಪಾಟೀಲ ಅವರು, ಆರೋಪಿಗಳ ಮುಂದೆಯೇ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ದೇಶನಗಳು ಇವೆಯಲ್ಲಾ ಎಂಬ ಅಂಶವನ್ನು ವಕೀಲರಿಗೆ ತಿಳಿಸಿದರು. ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ನಿಮ್ಮ ಕೋರಿಕೆಗೆ ಅವಕಾಶ ನೀಡಲು ಆಗುವುದಿಲ್ಲ ಎಂದು ಇದೇ 16ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News