×
Ad

ಎಂಟು ಜನ ಶಿರಸ್ತೇದಾರರ ವರ್ಗಾವಣೆ ವಿಚಾರ: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ನಿರ್ದೇಶನ

Update: 2019-01-11 21:26 IST

ಬೆಂಗಳೂರು, ಜ.11: ಬೇರೆ ಜಿಲ್ಲೆಗಳಿಂದ ಮೈಸೂರು ಜಿಲ್ಲಾ ನ್ಯಾಯಾಲಯ ವ್ಯಾಪ್ತಿಯ ಅಧೀನ ನ್ಯಾಯಾಲಯಗಳಿಗೆ ಎಂಟು ಜನ ಶಿರಸ್ತೇದಾರರನ್ನು ವರ್ಗಾವಣೆ ಮಾಡಿರುವ ಆದೇಶಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ನಿರ್ದೇಶಿಸಿದೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಮೈಸೂರು ಜಿಲ್ಲಾ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ (ಎಫ್‌ಡಿಎ) ಕಾರ್ಯ ನಿರ್ವಹಿಸುತ್ತಿರುವ ಮತ್ತು ಶಿರಸ್ತೇದಾರರಾಗಿ ಮುಂಭಡ್ತಿ ಹೊಂದಲು ಅರ್ಹತೆ ಹೊಂದಿರುವ ಐವರು ನೌಕರರು ಈ ಅರ್ಜಿ ಸಲ್ಲಿಸಿದ್ದಾರೆ.

ಜಿಲ್ಲಾ ನ್ಯಾಯಾಲಯಗಳಲ್ಲಿ ನೇಮಕಗೊಂಡ ನೌಕರರು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸೇವಾ ಜೇಷ್ಠತೆ ನಿಯಮ ಪಾಲಿಸುತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಅಂತರ ಜಿಲ್ಲಾ ಮಟ್ಟದಲ್ಲಿ ಶಿರಸ್ತೇದಾರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ನಮ್ಮ ಸೇವಾ ಜೇಷ್ಠತೆಗೆ ಅಡ್ಡಿಯಾಗುತ್ತದೆ ಎಂಬುದು ಅರ್ಜಿದಾರರ ವಾದ. ಈ ಪ್ರಕರಣದಲ್ಲಿ ಅಡ್ವೊಕೇಟ್ ಜನರಲ್ ಅವರು ಹಾಜರಾಗಿ ವಾದ ಮಂಡಿಸಲು ನಿರ್ದೇಶಿಸಲಾಗಿದೆ. ತಡೆ ಆದೇಶ ಮುಂದಿನ ವಿಚಾರಣಾ ದಿನಾಂಕ ಇದೆ ಜ.16 ರವರೆಗೆ ಜಾರಿಯಲ್ಲಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News