ಬಡ ಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ಸಿಗಲಿ

Update: 2019-01-11 18:46 GMT

ಮಾನ್ಯರೇ,

ರಾಜ್ಯದಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವುದಾಗಿ ಇತ್ತೀಚೆಗೆ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಹೇಳಿದ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕೆಲವು ಸಾಹಿತಿಗಳು ಇದಕ್ಕೆ ವಿರೋಧ ಪಡಿಸಿದ್ದರೆ, ಹೆಚ್ಚಿನವರು ಇದು ಸರಿಯಾದ ನಿರ್ಧಾರ ಎನ್ನುತ್ತಿದ್ದಾರೆ.

ಇಂಗ್ಲಿಷ್ ಮಾಧ್ಯಮ ಶಾಲೆಗಳು ಬೇಡ ಎನ್ನುವವರು ಇವತ್ತು ರಾಜ್ಯದಲ್ಲಿ ಗಲ್ಲಿ ಗಲ್ಲಿಗಳಲ್ಲಿ ರಾರಾಜಿಸುತ್ತಿರುವುದರ ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿರುದ್ಧ ಯಾಕೆ ಮಾತಾಡುವುದಿಲ್ಲ? ಇಂಗ್ಲಿಷ್ ವಿರೋಧಿಸುವವರು ಎಷ್ಟು ಜನ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಿದ್ದಾರೆ? ಅವರ ಮಕ್ಕಳಿಗೆ ಒಂದು ನ್ಯಾಯ ಮತ್ತು ಬಡವರ ಮಕ್ಕಳಿಗೆ ಇನ್ನೊಂದು ನ್ಯಾಯವೇ?.

ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಮಾತಾಡಿದ ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಹಿಂದಡಿ ಇಡಬಾರದು. ಆದರೆ ಅದಕ್ಕಿಂತ ಮೊದಲು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನಿಡುವಂತಹ ಶಿಕ್ಷಕರನ್ನು ತಯಾರಿಸಲು ಮುಂದಾಗಬೇಕಾಗಿದೆ. ಯಾಕೆಂದರೆ ಈಗಿರುವ ಕೆಲವು ಶಾಲೆಗಳ ಶಿಕ್ಷಕರಿಗೆ ಮಾತೃಭಾಷೆಯಲ್ಲಿಯೇ ಹಿಡಿತ ಇಲ್ಲ. ಇನ್ನು ಇವರಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವುದು ಸಾಧ್ಯವೇ?
ಇಂಗ್ಲಿಷ್ ಶಿಕ್ಷಣ ಆರಂಭಿಸುವ ಮುನ್ನ ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಕರನ್ನು ಸಿದ್ಧಗೊಳಿಸಬೇಕಾಗಿದೆ.

ಬಡ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿಯೇ ಇಂಗ್ಲಿಷ್ ಶಿಕ್ಷಣ ಕೊಡಿಸುವ ಬಗ್ಗೆ ಎಲ್ಲಾ ಸಾಹಿತಿಗಳು, ಹೋರಾಟಗಾರರು ಅಡ್ಡಿಪಡಿಸಬಾರದು. ಈ ವಿಷಯದ ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ಜನಪ್ರತಿನಿಧಿಗಳು ಸೇರಿ ಒಮ್ಮತದಿಂದ ನಿರ್ಣಯ ತೆಗೆದುಕೊಳ್ಳಬೇಕು. ಈ ನಿರ್ಣಯದಲ್ಲೇ ಬಡ ಮಕ್ಕಳ ಭವಿಷ್ಯ ಅಡಗಿದೆ. ಇದನ್ನು ಯಾರೂ ಮರೆಯಬಾರದು.

Similar News