ನಾಲ್ಕೂವರೆ ವರ್ಷಗಳಿಂದ ಭಾರತ ಅಸಹಿಷ್ಣುತೆಗೆ ಸಾಕ್ಷಿಯಾಗಿದೆ

Update: 2019-01-12 10:12 GMT

ದುಬೈ, ಜ.12: ಹೊಸ ವರ್ಷ 2019 ಅನ್ನು ‘ಸಹಿಷ್ಣುತೆಯ ವರ್ಷ’ ಎಂದು ಘೋಷಿಸಿದ ಸಂಯುಕ್ತ ಅರಬ್ ಸಂಸ್ಥಾನವನ್ನು ಹೊಗಳಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಭಾರತ ಕಳೆದ ನಾಲ್ಕೂವರೆ ವರ್ಷಗಳಿಂದ ಅಸಹಿಷ್ಣುತೆಗೆ ಸಾಕ್ಷಿಯಾಗಿದೆ ಎನ್ನುವ ಮೂಲಕ ಆಡಳಿತ ನರೇಂದ್ರ ಮೋದಿ ಸರಕಾರದ ಮೇಲೆ ಪರೋಕ್ಷ ದಾಳಿ ನಡೆಸಿದ್ದಾರೆ.

ದುಬೈಗೆ ತಮ್ಮ ಪ್ರಥಮ ಭೇಟಿ ವೇಳೆ ಅಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೇರಿದ್ದ ಸಾವಿರಾರು ಭಾರತೀಯರನ್ನುದ್ದೇಶಿಸಿ ಮಾತನಾಡಿದ ರಾಹುಲ್, “ನಮ್ರತೆ ಮತ್ತು ಸಹಿಷ್ಣುತೆ ಭಾರತ ಮತ್ತು ಸಂಯುಕ್ತ ಅರಬ್ ಸಂಸ್ಥಾನದ ಜನರನ್ನು ಒಂದುಗೂಡಿಸಿದೆ. ಒಂದೇ ಸಿದ್ಧಾಂತ ಸರಿ, ಇತರ ಎಲ್ಲವೂ ತಪ್ಪು ಎಂದು ಹೇಳಿಕೊಂಡು ದೇಶವನ್ನು ನಡೆಸಲು ಸಾಧ್ಯವಿಲ್ಲ,'' ಎಂದು ಹೇಳಿದರು.

``ಅಮಾನ್ಯೀಕರಣ ಮತ್ತು ಜಿಎಸ್‍ಟಿಯಿಂದ ಭಾರತ ಬಹಳಷ್ಟು ಬಾಧಿತವಾಗಿದೆ. ಉದ್ಯೋಗಗಳ ಸೃಷ್ಟಿ ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ, ನಾವು ಚೀನಾವನ್ನು ಈ ನಿಟ್ಟಿನಲ್ಲಿ ಸೋಲಿಸಬಹುದಾಗಿದೆ. ನಮ್ಮ ರೈತರು ಸಮಸ್ಯೆಯಲ್ಲಿದ್ದಾರೆ. ನಮಗೆ ಎರಡನೇ ಹಸಿರು ಕ್ರಾಂತಿಯ ಅಗತ್ಯವಿದೆ'' ಎಂದರು.

``ನೀವು ದುಬೈಗೆ ಬಂದರೂ ನಿಮ್ಮ ಹೃದಯಲ್ಲಿ ಭಾರತ ನೆಲೆಸಿರುತ್ತದೆ.  ನನ್ನ ಕೊನೆಯುಸಿರಿರುವ ತನಕವೂ ನನ್ನ ಬಾಗಿಲು, ಹೃದಯ ಮತ್ತು ಕಿವಿಗಳು ನಿಮಗಾಗಿ ತೆರೆದಿರುತ್ತವೆ” ಎಂದು ರಾಹುಲ್ ಭಾವೋದ್ವೇಗದಿಂದ ಹೇಳಿದರು.

“ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಭಾರತೀಯ ಉದ್ಯೋಗಿಗಳು ಆ ದೇಶದ  ಅಭಿವೃದ್ಧಿಗಾಗಿ ತಮ್ಮ ಬೆವರು ಹರಿಸಿದ್ದಾರೆ ಹಾಗೂ ಭಾರತಕ್ಕೆ ಹೆಮ್ಮೆಯುಂಟು ಮಾಡಿದ್ದಾರೆ. ನೀವು ಈ ದೇಶ ಕಟ್ಟಲು ಸಹಕರಿಸಿದ್ದೀರಿ'' ಎಂದರು.

"ನನ್ನ ಪ್ರೀತಿಯ ಭಾರತವನ್ನು ಧರ್ಮ, ಜಾತಿ, ಶ್ರೀಮಂತ, ಬಡವ ಎಂಬ ಬೇಧಭಾವದಿಂದ ಹೋಳಾಗಿಸಲಾಗುತ್ತಿದೆ'' ಎಂದು ಅವರು ಖೇದ ವ್ಯಕ್ತಪಡಿಸಿದರು.

ಬಿಜೆಪಿಯ ಕಾಂಗ್ರೆಸ್ ಮುಕ್ತ್ ಭಾರತ್ ಘೋಷಣೆಯನ್ನು ಅಣಕವಾಡಿದ ರಾಹುಲ್, "ನಮಗೆ ಬಿಜೆಪಿ ಮುಕ್ತ್ ಭಾರತ್ ಬೇಡ, ಪ್ರತಿಯೊಬ್ಬ ನಾಗರಿಕ ತಾನು ಮೊದಲು ಭಾರತೀಯ ಎಂದು  ಹೇಳುವುದು ನಮಗೆ ಬೇಕಿದೆ,. ಭಾರತದ ಭವಿಷ್ಯ ಅನಿವಾಸಿ ಭಾರತೀಯರ ಭವಿಷ್ಯದೊಂದಿಗೆ ನೇರ ಸಂಬಂಧ ಹೊಂದಿದೆ'' ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News