ಮಹಾತ್ಮ ಗಾಂಧಿ ಆದರ್ಶ ಪಾಲನೆ ನಮ್ಮೆಲ್ಲರ ಜವಾಬ್ದಾರಿ: ಪ್ರೊ.ಬರಗೂರು ರಾಮಚಂದ್ರಪ್ಪ

Update: 2019-01-12 12:38 GMT

ಬೆಂಗಳೂರು, ಜ. 12: ಇಂದಿನ ಆಧುನಿಕ ಯುಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ತತ್ವ-ಆದರ್ಶಗಳನ್ನು ಪಾಲಿಸುವ ಮೂಲಕ ಉತ್ತಮ ಸಮಾಜವನ್ನು ಕಟ್ಟುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಶನಿವಾರ ಬೆಂಗಳೂರು ವಿಶ್ವ ವಿದ್ಯಾಲಯದ ಇತಿಹಾಸ ವಿಭಾಗ ಜ್ಞಾನಭಾರತಿ ಆವರಣದ ಪ್ರೊ.ಕೆ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಇಂದಿನ ದಿನಗಳಲ್ಲಿ ಗಾಂಧಿಯ ಪ್ರಸ್ತುತತೆ’ ಎಂಬ ವಿಚಾರವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಹಾತ್ಮಗಾಂಧಿ ಅವರ ಆಶಯಗಳನ್ನು ನಾವು ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ಸಮಾನತೆಯ ಹೋರಾಟವನ್ನು ಮಾಡಿರುವುದು ಗಾಂಧಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್. ಅವರ ಆಶಯಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಗಾಂಧೀಜಿ ಅವರು ಕನಸಿನ ಭಾರತ ಎಂದರೆ ಜಾತಿ, ವರ್ಗವಿಲ್ಲದ ಭಾರತ. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ವರ್ಗದವರನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿದರು. ಗಾಂಧಿ ಅವರ ವ್ಯಕ್ತಿತ್ವದಲ್ಲಿ ಸಂಸ್ಕೃತಿಯನ್ನು ನೋಡಬಹದು ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್ ಮಾತನಾಡಿ, ಮಹಾತ್ಮ ಗಾಂಧಿ ಸತ್ಯಾಗ್ರಹದ ಮೂಲಕ ಹೋರಾಟವನ್ನು ಮಾಡಿ ಸ್ಫೂರ್ತಿಯಾದರು. ಸತ್ಯದ ಪರಿಶೋಧನಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸಮಾಜ ಸೇವೆಯಲ್ಲಿ ಸರಳ ಜೀವನವನ್ನು ನಡೆಸಿದ್ದರು ಎಂದರು.

ಕಾರ್ಯಕ್ರಮದಲ್ಲಿ ಉಸ್ಮಾನಿಯಾ ವಿಶ್ವ ವಿದ್ಯಾಲಯದ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅಡಪ ಸತ್ಯನಾರಾಯಣ, ಇತಿಹಾಸ ವಿಭಾಗದ ಪ್ರೊ.ಎಸ್. ನಾಗರತ್ನಮ್ಮ, ಪ್ರೊ.ಎಂ.ಜಮುನ, ವಿವಿ ಅಧ್ಯಾಪಕ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News