"ಭ್ರಷ್ಟಾಚಾರ ಆರೋಪಕ್ಕೆ ಸದನದಲ್ಲಿ ಉತ್ತರಿಸಲಾಗದ ಮೋದಿಯ ಒಣ ಪೌರುಷ ಹಾಸ್ಯಾಸ್ಪದ"

Update: 2019-01-12 13:30 GMT

ಬೆಂಗಳೂರು, ಜ. 12: ಮಿತ್ರ ಪಕ್ಷದ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಗುಮಾಸ್ತನ (ಕ್ಲಕ್) ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಮೋದಿ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು’ ಎಂದು ತಿರುಗೇಟು ನೀಡಿದ್ದಾರೆ.

‘ಪ್ರಜಾಪ್ರಭುತ್ವದ ಆಶಯದಂತೆ ರಚನೆಯಾದ ಮೈತ್ರಿ ಸರಕಾರದ ಮುಖ್ಯಮಂತ್ರಿಯನ್ನು ಗುಮಾಸ್ತ ಎಂದಿದ್ದೀರಿ. ವೈಫಲ್ಯದ ನಾಯಕ, ಸುಳ್ಳುಗಳ ಸರದಾರ ನೀವು. ಪ್ರಧಾನಿ ಹುದ್ದೆಯ ಘನತೆಗೆ ಕುಂದು ತಂದಿದ್ದೀರಿ. ಸದನಕ್ಕೆ ಹಾಜರಾಗಿ ನಿಮ್ಮ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಉತ್ತರ ನೀಡಲಾಗದ ನಿಮ್ಮ ಈ ಒಣ ಪೌರುಷ ಹಾಸ್ಯಾಸ್ಪದ’ ಎಂದು ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

‘ಪ್ರಧಾನಿ ಮೋದಿಯವರು ನಾನು ಆಡದೇ ಇರುವ ಮಾತನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದನ್ನು ಕೇಳಿದರೆ ಹಾಸ್ಯಾಸ್ಪದ ಎನ್ನಿಸುತ್ತದೆ. ರೈತರ ಸಾಲದ ವಿಚಾರದ ಬಳಿಕ ಇದೀಗ ಎರಡನೇ ಬಾರಿ ಅವರು ಸುಳ್ಳು ಮಾಹಿತಿಯನ್ನು ಆಧರಿಸಿ ಪ್ರಧಾನಿ ಮೋದಿ ಇಂತಹ ಹೇಳಿಕೆ ನೀಡಿದ್ದಾರೆ. ಆದರೆ, ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅಭಿವೃದ್ಧಿ ಅಜೆಂಡಾವನ್ನು ಯಾವುದೇ ಕಾರಣಕ್ಕೂ ತಡೆಯಲಾಗದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಟ್ವಿಟ್ಟರ್ ಮೂಲಕ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಎನ್‌ಡಿಎ ಮೈತ್ರಿ ಕಳ್ಳರ ಸಂತೆ ಅಲ್ಲವೇ: ‘ಮಹಾಮೈತ್ರಿ ಕಳ್ಳರ ಸಂತೆಯಾದರೆ, ಎನ್‌ಡಿಎ ಮೈತ್ರಿ ಕಳ್ಳರ ಸಂತೆ ಅಲ್ಲವೇ? ಎಂದು ಪ್ರಶ್ನಿಸಿರುವ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನದ ಘನತೆ ಅರಿತು ಮಾತನಾಡಿದರೆ ಒಳಿತು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಹೀಗಿರುವಾಗ ಮೋದಿ ಅನಗತ್ಯ ಟೀಕೆ ಸರಿಯಲ್ಲ ಎಂದು ಖರ್ಗೆ ಆಕ್ಷೇಪಿಸಿದರು.

ರಾಜ್ಯ ರಾಜಕಾರಣದ ಬಗ್ಗೆಯೂ ಮಾತನಾಡಿದ ಅವರು ಸಂಕ್ರಾಂತಿಗೆ ಕ್ರಾಂತಿಯೇನು ಆಗುವುದಿಲ್ಲ. ಬಿಜೆಪಿಯವರು ತಮ್ಮ ಮನೆಗಳಲ್ಲಿ ಸಂಕ್ರಾಂತಿ ಹಬ್ಬ ಮಾಡ್ತಾರೆ ಅಷ್ಟೇ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಯಾರೂ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ಸರಕಾರ ನಡೆಯುತ್ತಿದೆ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯವಿರಬಹುದು. ಅದೆಲ್ಲವನ್ನೂ ಆಯಾ ಪಕ್ಷದ ನಾಯಕರು ಸರಿಪಡಿಸುತ್ತಾರೆ. ಬಿಜೆಪಿಯವರು ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಪ್ರಧಾನಿ ಮೋದಿಯವರಿಗೇನು ಕೆಲಸ. ಮೋದಿ ರಾಜಕೀಯ ಕಾರಣಕ್ಕಾಗಿ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿದ್ದು, ನಮ್ಮ ಮೈತ್ರಿಯ ಬಗ್ಗೆ ಅವರಿಗೇನು ಗೊತ್ತು. ಕಾಂಗ್ರೆಸ್ ವಿರುದ್ಧ ಜೆಡಿಎಸ್ ಎತ್ತುಕಟ್ಟುವ ಕೆಲಸವನ್ನು ಮೋದಿ ಮಾಡಿರುವುದು ಸರಿಯಲ್ಲ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News