ಎಲೆಕ್ಟ್ರಿಕ್ ಬಸ್ ಖರೀದಿಗೆ ಎರಡು ತಿಂಗಳಲ್ಲಿ ಕ್ರಮ: ಬಿಎಂಟಿಸಿ ಅಧ್ಯಕ್ಷ ಎನ್.ಎ.ಹಾರಿಸ್

Update: 2019-01-12 13:54 GMT

ಬೆಂಗಳೂರು, ಜ.12: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುವ ಸಂಬಂಧ ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಎರಡು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ಅಧ್ಯಕ್ಷ ಎನ್.ಎ.ಹಾರಿಸ್ ತಿಳಿಸಿದರು.

ಶನಿವಾರ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಲೆಕ್ಟ್ರಿಕ್ ಬಸ್‌ಗಳನ್ನು ನೇರವಾಗಿ ಖರೀದಿಸಬೇಕಾ, ಇಲ್ಲವೆ ಗುತ್ತಿಗೆಯಲ್ಲಿ ಖರೀದಿಬೇಕಾ ಎನ್ನುವುದು ಗೊಂದಲದಲ್ಲಿದೆ. ಹೀಗಾಗಿ ಕಡತಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಭ್ರಷ್ಟರಿಗೆ ಎಚ್ಚರಿಕೆ: ಬಿಎಂಟಿಸಿ ಬಸ್‌ಗಳಿಗೆ ಡೀಸೆಲ್ ತುಂಬಿಸುವಲ್ಲಿ ಸೇರಿದಂತೆ ಪ್ರತಿಯೊಂದು ಹಂತದಲ್ಲಿ ಭ್ರಷ್ಟಾಚಾರ ತುಂಬಿದೆ ಎಂಬ ಆರೋಪಗಳಿಗೆ ಉತ್ತರಿಸಿದ ಅವರು, ಬಿಎಂಟಿಸಿಯಲ್ಲಿ ಭ್ರಷ್ಟಾಚಾರ ನಡೆದಿರುವುದರ ಬಗ್ಗೆ ದಾಖಲೆ ಸಮೇತ ನನಗೆ ಸಾಕ್ಷಿ ಒದಗಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದ್ದು ಕಂಡು ಬಂದರೆ ಅಗತ್ಯ ಕ್ರಮ ಕೈಗೊಳ್ಳುವುದು ಖಚಿತವೆಂದು ಎಚ್ಚರಿಕೆ ನೀಡಿದರು.

ಬಸ್ ಸಿಬ್ಬಂದಿಗಳಿಗೆ ಗುರುತಿನ ಚೀಟಿ: ಇಲ್ಲಿಯವರೆಗೂ ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕರಿಗೆ ಗುರುತಿನ ಚೀಟಿ ಇರಲಿಲ್ಲ. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಶೀಘ್ರವೆ ಎಲ್ಲ ಚಾಲಕ ಹಾಗೂ ನಿರ್ವಾಹಕರಿಗೆ ಗುರುತಿನ ಚೀಟಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸ್ಮಾರ್ಟ್ ಕಾರ್ಡ್ ಶೀಘ್ರ: ಬಿಎಂಟಿಸಿ ಪ್ರಯಾಣಿಕರಿಗೆ ಮೆಟ್ರೋ ರೈಲು ಮಾದರಿಯಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಕಲ್ಪಿಸಲು ಈಗಾಗಲೆ ಆಕ್ಸಿಸ್ ಬ್ಯಾಂಕ್ ಜೊತೆಗೆ ಒಪ್ಪಂದವಾಗಿದೆ. ಇದು ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ ಎಂಬುದು ಗೊತ್ತಿಲ್ಲ. ಶೀಘ್ರವೆ ಸ್ಮಾರ್ಟ್ ಕಾರ್ಡ್ ಜಾರಿ ಮಾಡುವ ಮೂಲಕ, ಅವ್ಯವಹಾರಕ್ಕೆ ಕಡಿವಾಣ ಹಾಕಲಾಗುವುದು ಎಂದು ಅವರು ಹೇಳಿದರು.

ಬಿಎಂಟಿಸಿ ಸಂಬಂಧಿಸಿದ ವಾಣಿಜ್ಯ ಕಟ್ಟಡಗಳನ್ನು ಪರಿಣಾಮಕಾರಿಯಾಗಿ ದುರಸ್ಥಿ ಮಾಡಿ, ಬಾಡಿಗೆಗೆ ನೀಡಲಾಗುವುದು. ಹಾಗೂ ಟಿಟಿಎಂಸಿಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಒಟ್ಟಾರೆ ಬಿಎಂಟಿಸಿ ಲಾಭದತ್ತ ಕೊಂಡೊಯ್ಯಲು ಎಲ್ಲ ರೀತಿಯ ಸೂಕ್ತ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News