ಮಧುಕರ್ ಶೆಟ್ಟಿ ಭ್ರಮೆಯಲ್ಲಿ ಬದುಕಿದವರಲ್ಲ: ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು

Update: 2019-01-12 14:01 GMT

ಬೆಂಗಳೂರು, ಜ. 12: ಮಧುಕರ್ ಶೆಟ್ಟಿ ಐಎಎಸ್ ಅಧಿಕಾರಿಯಾದ ತಕ್ಷಣವೇ ಏನನ್ನೋ ಸಾಧಿಸಿದೆ ಎಂಬ ಭ್ರಮೆಯಲ್ಲಿರಲಿಲ್ಲ. ಪ್ರತಿದಿನವೂ ಗೊಂದಲದ ವಾತಾವರಣದಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿದ್ದರು ಎಂದು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಶಾಸಕರ ಭವನದಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಆಯೋಜಿಸಿದ್ದ ಇತ್ತೀಚಿಗೆ ನಿಧನರಾದ ದಕ್ಷ ಪೊಲೀಸ್ ಅಧಿಕಾರಿ ಡಾ.ಮಧುಕರ್ ಶೆಟ್ಟಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನೊಬ್ಬ ಅಧಿಕಾರಿ ಎಂಬ ಅಹಂ ಅವರಲ್ಲಿ ಇರಲಿಲ್ಲ. ಅವರದ್ದು ಭಿನ್ನ ವ್ಯಕ್ತಿತ್ವವಾಗಿತ್ತು. ಅಲ್ಲದೆ, ಅವರು ಸರಳವಾಗಿದ್ದರೂ, ಅರ್ಥ ಮಾಡಿಕೊಳ್ಳುವುದು ಕಷ್ಟಕರವಾಗಿತ್ತು ಎಂದು ಹೇಳಿದರು.

ಮಧುಕರ್ ಶೆಟ್ಟಿ ಅಕಾಲಿಕ ಮರಣದ ನಂತರ ಮಾಧ್ಯಮಗಳು ಮೃತದೇಹ ಮುಂದಿಟ್ಟುಕೊಂಡು ಏನೂ ತಿಳಿಯದೇ ಅನಗತ್ಯವಾದ ಚರ್ಚೆಗಳನ್ನ ನಡೆಸಿದ್ದು ನನಗೆ ತುಂಬಾ ಬೇಸರವೆನಿಸಿತು. ಸಿಂಗಂ, ಹೆಬ್ಬುಲಿ, ಕಡಕ್ ಅಧಿಕಾರಿ ಎಂಬ ಹೆಸರುಗಳನ್ನಿಟ್ಟು ಚರ್ಚೆಗಳು ನಡೆಸಿದವರಿಗೆ ನಾಚಿಕೆಯಾಗಬೇಕು. ಸಿನಿಮಾದ ಪರಿಭಾಷೆಯಿಂದ ಹೊರಬಂದು ಹೊಸ ಭಾಷೆ ಸೃಷ್ಟಿಸದ ಸ್ಥಿತಿಗೆ ಮಾಧ್ಯಮಗಳು ಇಳಿದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಟಿವಿ ಮಾಧ್ಯಮಗಳು ಹೇಳುವುದನ್ನು ಜನರು ನಂಬಬಾರದು ಎಂದು ಹೇಳಿದ ಅವರು, ಒಬ್ಬ ವ್ಯಕ್ತಿಯನ್ನು ಅಥವಾ ಸಂದರ್ಭವನ್ನು ಅರ್ಥೈಸಿಕೊಳ್ಳಲು ಬೇಕಾದ ದಾರಿಗಳೇ ಬೇರೆ ಇದೆ. ಪರ್ಯಾಯ ದಾರಿಗಳನ್ನು ಕಂಡುಕೊಳ್ಳಬೇಕು ಎಂದು ಸುಗತ ಶ್ರೀನಿವಾಸರಾಜು ಸಲಹೆ ನೀಡಿದರು.

ಮೌಲ್ಯ ಎಂಬುದು ಬೆಸ್ಟ್ ಪಾಲಿಸಿ: ಮಧುಕರ ಶೆಟ್ಟಿಗೆ ಪ್ರಾಮಾಣಿಕತೆ ಎನ್ನುವುದು ಮೌಲ್ಯವಾಗಿತ್ತು, ಪಾಲಿಸಿ ಆಗಿರಲಿಲ್ಲ. ಹೀಗಾಗಿ ಅವರು ಕಷ್ಟ ಪಡಬೇಕಾಯಿತು. ಆದರೆ, ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ನಾವು ಪ್ರಾಮಾಣಿಕರೆಂದು ಸಾಬೀತುಪಡಿಸಿಕೊಳ್ಳಲು ವೇಷಗಳನ್ನು ಧರಿಸುತ್ತಾರೆ. ಆದರೆ, ಮಧುಕರಗೆ ಅದೊಂದು ಮೌಲ್ಯವಾಗಿತ್ತು ಎಂದು ಪ್ರತಿಪಾದಿಸಿದರು.

ನಾನು ಹಾಗೂ ಮಧುಕರ್ ನ್ಯಾಷನಲ್ ಕಾಲೇಜಿನಲ್ಲಿ ಬಿಎ ಮಾಡಲು ಸೇರಿಕೊಂಡಾಗ ಮೊದಲ ಭಾರಿಗೆ ಭೇಟಿಯಾದೆವು. ನಾನು ಮನೆಯಿಂದ ಕಾಲೇಜಿಗೆ ಬರುತ್ತಿದ್ದೆ, ಅವರು ಹಾಸ್ಟೆಲ್‌ನಿಂದ ಬರುತ್ತಿದ್ದರು. ತುಂಬಾ ಆತ್ಮೀಯನಾಗಿದ್ದ ಅವರದ್ದು ಕಲ್ಮಷವಿಲ್ಲದ ಮನಸ್ಸಾಗಿತ್ತು ಎಂದ ಅವರು, ಮೊದಲ ವರ್ಷದ ಪದವಿಯಲ್ಲಿ ಅವರನ್ನು ರೇಗಿಸಿದ್ದಕ್ಕೆ ಕೋಪ ಮಾಡಿಕೊಂಡಿದ್ದ, ಅವರಿಗೆ ಸಮಾಧಾನ ಮಾಡಲು ತುಂಬಾ ಕಷ್ಟಪಡಬೇಕಾಯಿತು ಎಂದು ನೆನಪುಗಳನ್ನು ಹಂಚಿಕೊಂಡರು.

ಕಾಲೇಜಿನಲ್ಲಿ ಓದುತ್ತಿರಬೇಕಾದರೆ ಮಧುಕರ್ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಹಣಕಾಸಿನ ಮುಗ್ಗಟ್ಟಿನಿಂದಾಗಿ ಮುಂಗಾರು ಪತ್ರಿಕೆ ಮುಚ್ಚುವ ಸ್ಥಿತಿಗೆ ತಲುಪಿತ್ತು. ಅಲ್ಲದೆ, ಅವರ ತಾಯಿ ಖಾಯಿಲೆ ಬಿದ್ದು ಸೀರಿಯಸ್ ಆಗಿ ಆಸ್ಪತ್ರೆಯಲ್ಲಿಯೇ ತೀರಿಕೊಂಡರು. ಈ ಸಂಗತಿಗಳು ಅವರನ್ನು ತೀವ್ರವಾಗಿ ಕುಗ್ಗಿಸಿಬಿಟ್ಟಿದ್ದವು ಎಂದು ಸುಗತ ತಿಳಿಸಿದರು.

ನ್ಯಾಷನಲ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಎ ಪರೀಕ್ಷೆಯಲ್ಲಿ ಮಧುಕರ್‌ಗೆ ನನಗಿಂತ ಕಡಿಮೆ ಅಂಕ ಬಂದಿತ್ತು. ಅದಕ್ಕೆ ಅವರು ಹಾಸ್ಟೆಲ್‌ನ ತನ್ನ ಕೊಠಡಿಗೆ 34 ಗಂಟೆಗಳ ಕಾಲ ಬಾಗಿಲು ಹಾಕಿಕೊಂಡು ಅತ್ತಿದ್ದ. ಎಷ್ಟು ಸಮಾಧಾನ ಪಡಿಸಿದರೂ ಅವರು ಸಮಾಧಾನಗೊಂಡಿರಲಿಲ್ಲ. ಕೊನೆಗೆ ಎಚ್.ನರಸಿಂಹಯ್ಯ ಅವರನ್ನೇ ಕರೆದುಕೊಂಡು ಹೋದೆವು. ನರಸಿಂಹಯ್ಯ ಉಪ್ಪಿಟ್ಟು ಮಾಡಿಕೊಂಡು ಬಂದು ತಿನ್ನಿಸುವ ಮೂಲಕ ಸಮಾಧಾನ ಮಾಡಿದ್ದರು ಎಂದು ತನ್ನ ಕಾಲೇಜಿನ ದಿನಗಳ ಸಂಬಂಧವನ್ನು ಮೆಲುಕು ಹಾಕಿದರು.

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್ ಮಾತನಾಡಿ, ಮಧುಕರ್‌ಗೂ ನನಗೂ ಹತ್ತಿರ ಸಂಬಂಧವಿಲ್ಲದಿದ್ದರೂ ಅಪಾರವಾದ ಪ್ರೀತಿಯಿದೆ. ನನ್ನ ಅಧಿಕಾರದ ಅವಧಿಯಲ್ಲಿ ಕಂಡ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಮಧುಕರ್ ಆಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಹಲವರು ಪ್ರಾಮಾಣಿಕರಿದ್ದರೂ ಮಧುಕರ್ ಭಿನ್ನವಾಗಿ ಕಾಣುತ್ತಿದ್ದರು ಎಂದು ನುಡಿದರು.

ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ನನಗೆ ಮಂಡ್ಯ ಉಸ್ತುವಾರಿ ಜವಾಬ್ದಾರಿ ಇತ್ತು. ನಾನು ಪಾದಯಾತ್ರೆಯ ಭದ್ರತೆಯ ಜವಾಬ್ದಾರಿ ನಿರ್ವಹಿಸಲು ಮಂಡ್ಯ ಗಡಿಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಚನ್ನಪಟ್ಟಣದಿಂದ ಮಂಡ್ಯದ ಗಡಿವರೆಗೂ ಮಧುಕರ್ ನಡೆದುಕೊಂಡು ಬಂದಿದ್ದರು. ಇದು ಅವರ ಪ್ರಾಮಾಣಿಕತೆಗೆ, ದಕ್ಷತೆಗೆ ನಿದರ್ಶನವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹಾಗೂ ಮಾಜಿ ಶಾಸಕ ರಮೇಶ್ ಬಾಬು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News