ವಿವೇಕಾನಂದ ಜನ್ಮದಿನಾಚರಣೆ: ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಪಥಸಂಚಲನ

Update: 2019-01-12 14:07 GMT

ಬೆಂಗಳೂರು, ಜ.12: ನಗರದ ಬಿಬಿಎಂಪಿ ಶಾಲಾ-ಕಾಲೇಜುಗಳ ಸ್ಕೌಟ್ಸ್ ಅಂಡ್ ಗೈಡ್ಸ್‌ನ ನೂರಾರು ವಿದ್ಯಾರ್ಥಿಗಳು ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಪಥಸಂಚಲನ ನಡೆಸಿದರು.

ನಗರದ ಹಲಸೂರ್ ಗೇಟ್ ಪೊಲೀಸ್ ಠಾಣೆಯ ಬಳಿ ಸಮಾವೇಶಗೊಂಡಿದ್ದ ನೂರಾರು ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶಗಳು, ಅವರ ಘೋಷಣೆಗಳಿದ್ದ ಫಲಕಗಳನ್ನು ಪ್ರದರ್ಶಿಸುತ್ತಾ ಪಥ ಸಂಚಲನ ನಡೆಸುವ ಮೂಲಕ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರು. ಮೈಸೂರು ಬ್ಯಾಂಕ್ ವೃತ್ತ, ಕೆ.ಆರ್. ವೃತ್ತ ಮೂಲಕ ಬಿಬಿಎಂಪಿ ಕೇಂದ್ರ ಕಚೇರಿವರೆಗೂ ಮೆರವಣಿಗೆ ನಡೆಸಿದರು.

ವಿವೇಕಾನಂದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪಥಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದ ಮೇಯರ್ ಗಂಗಾಂಬಿಕೆ, ವಿವೇಕಾನಂದರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಏಳಿ ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ ಎಂದು ಅವರು ನೀಡಿರುವ ಸಂದೇಶವನ್ನು ಎಂದಿಗೂ ಮರೆಯಬೇಡಿ ಎಂದು ಕರೆ ನೀಡಿದರು.

ಇಂದಿನ ಮಕ್ಕಳೇ ಭವಿಷ್ಯದ ಆಶಾಕಿರಣ. ವಿವೇಕಾನಂದರ ಮಾರ್ಗದರ್ಶನದಲ್ಲಿ ಸಾಗುವ ಮೂಲಕ ಸಂಸ್ಕಾರಯುತ ರಾಷ್ಟ್ರವನ್ನಾಗಿ ಮಾಡಲು ಕಂಕಣಬದ್ಧರಾಗಬೇಕು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಅಪರ ಆಯುಕ್ತ ರಂದೀಪ್, ಕೌನ್ಸಿಲ್ ಕಾರ್ಯದರ್ಶಿ ಪಲ್ಲ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಲ್ಲಯ್ಯ ಹಾಗೂ ಬಿಬಿಎಂಪಿ ಶಾಲಾ- ಕಾಲೇಜುಗಳ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಕ್ಷಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News