ದಿವ್ಯಾಂಗ ಮತದಾರರ ಕುರಿತು ಕರ್ನಾಟಕ ಮುಖ್ಯಚುನಾವಣಾಧಿಕಾರಿ ರೂಪಿಸಿದ ಕಾರ್ಯಕ್ರಮ ಶ್ಲಾಘನೀಯ: ಸುನೀಲ್ ಅರೋರ

Update: 2019-01-12 14:30 GMT

ಬೆಂಗಳೂರು, ಜ.12: ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದಿವ್ಯಾಂಗರು ಮತದಾನ ಮಾಡಲು ಹಾಗೂ ಮತದಾನದ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ಕೈಗೊಂಡ ಕಾರ್ಯಕ್ರಗಳ ಕುರಿತು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸದಿಲ್ಲಿಯಲ್ಲಿ ಹಮ್ಮಿಕೊಂಡಿರುವ ಲೋಕಸಭಾ ಚುನಾವಣೆ-2019ರ ಕುರಿತ ಪೂರ್ವ ತಯಾರಿ ಕಾರ್ಯಾಗಾರದಲ್ಲಿ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಿವ್ಯಾಂಗರಿಗೆ ಮತದಾನದ ಕುರಿತು ಅರಿವು ಮೂಡಿಸಲು ಅನುಸರಿಸಿದ ಕಾರ್ಯಕ್ರಮಗಳ ಮಾಹಿತಿಯಿರುವ ಕೈಪಿಡಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಟ್ಟು ನಾಲ್ಕು ಲಕ್ಷ ದಿವ್ಯಾಂಗ ಮತದಾರರನ್ನು ಗುರುತಿಸಲಾಗಿದ್ದು, ಮೊದಲ ಬಾರಿಗೆ ದಿವ್ಯಾಂಗ ಒಲಂಪಿಯನ್ ಗಿರೀಶ್ ಗೌಡ ಮತ್ತು ಅಶ್ವಿನಿ ಅಂಗಡಿಯವರನ್ನು ಆಯೋಗದ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿತ್ತು. ಅವರಿಗಾಗಿ ವಿಶೇಷ ಆಟವನ್ನು ಸಹ ಆಯೋಗ ಸಿದ್ದಪಡಿಸಿದ್ದು ಒಳ್ಳೆಯ ಬೆಳವಣಿಗೆಯೆಂದು ಅವರು ಹೇಳಿದರು.

ದೃಷ್ಟಿ ದೋಷವುಳ್ಳ ದಿವ್ಯಾಂಗರ ಸಹಾಯಕ್ಕಾಗಿ ವೋಟರ್ ಗೈಡ್‌ಲೈನ್ ಪುಸ್ತಕವನ್ನು ಬ್ರೈಲ್ ಲಿಪಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಕರ್ನಾಟಕ ರಾಜ್ಯ ವಿಧಾನಸಭೆಯ ಇತ್ತೀಚಿನ ಉಪಚುನಾವಣೆಯಲ್ಲಿ ಮತದಾನದ ದಿನ ದಿವ್ಯಾಂಗರನ್ನು ಮನೆಯಿಂದ ಕರೆತಂದು ಮತದಾನ ಮಾಡಿಸಿ ನಂತರ ಅವರ ಮನೆಗೆ ಬಿಡಲು ವಾಹನ ವ್ಯವಸ್ಥೆಯನ್ನು ಸಹ ಮಾಡಿಸಲಾಗಿತ್ತು. ಇನ್ನೂ ಅನೇಕ ಕಾರ್ಯಕ್ರಮಗಳನ್ನು ದಿವ್ಯಾಂಗರಿಗಾಗಿ ಆಯೋಗ ಹಮ್ಮಿಕೊಂಡಿತ್ತು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಾಗಾರದಲ್ಲಿ ಚುನಾವಣಾ ಆಯೋಗದ ಆಯುಕ್ತ ಅಶೋಕ್ ಲವಾಸ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸೇರಿದಂತೆ ಆಯೋಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News