ಪ್ರಜಾಪ್ರಭುತ್ವದ ಯೋಧರಾಗಲು ವಿದ್ಯಾರ್ಥಿಗಳಿಗೆ ಚುನಾವಣಾಧಿಕಾರಿ ಸೂರ್ಯಸೇನ್ ಕರೆ

Update: 2019-01-12 16:03 GMT

ಬೆಂಗಳೂರು, ಜ. 12: ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡುವ ಮೂಲಕ ಬಲಿಷ್ಠ ಪ್ರಜಾಪ್ರಭುತ್ವವನ್ನು ಬೆಳೆಸುವ ಮತ್ತು ಉಳಿಸುವ ಜವಾಬ್ಧಾರಿಯನ್ನು ಮೆರೆಯಬೇಕು ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಸೂರ್ಯಸೇನ್ ಹೇಳಿದ್ದಾರೆ.

ಶನಿವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಚುನಾವಣಾ ಆಯೋಗ, ಬಿಬಿಎಂಪಿ ಮತ್ತು ಬಿ-ಪ್ಯಾಕ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ನಾನು ಪ್ರಜಾಪ್ರಭುತ್ವದ ರಾಯಭಾರಿ, ನೀವು?’ ಎಂಬ ಮತದಾರರ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಯೋಧರಾಗಿ ಎಂದು ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಬೂತ್ ಮಟ್ಟಗಳಲ್ಲಿ ಮತದಾನವನ್ನು ಪ್ರೋತ್ಸಾಹಿಸಿ ಹಾಗೂ ದಿವ್ಯಾಂಗರ ಸಹಾಯಕ್ಕಾಗಿ ಸ್ಥಳೀಯರನ್ನೊಳಗೊಂಡ ಸಮಿತಿಗಳನ್ನು ಬಳಸಿಕೊಳ್ಳಲು ಚುನಾವಣಾ ಆಯೋಗ ಸಹಕಾರ ನೀಡಿ. ಜನರಲ್ಲಿ ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಆಯೋಗದ ಮುಖ್ಯ ಉದ್ದೇಶಗಳಲ್ಲೊಂದಾಗಿದೆ, ರಾಜ್ಯಾದ್ಯಂತ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಬಿಬಿಎಂಪಿ ಚುನಾವಣೆ ಸಹಾಯಕ ಆಯುಕ್ತ ಡಾ.ನಟೇಶ್ ಮಾತನಾಡಿ, ಚುನಾವಣೆ ನಡೆಯುವ ರೀತಿ ಹಾಗೂ ಚುನಾವಣಾಧಿಕಾರಿಗಳ ಜವಾಬ್ಧಾರಿಯನ್ನು ವಿವರಿಸಿದರು. ಬಿ-ಪ್ಯಾಕ್ ಸಂಸ್ಥೆಯ ಪ್ರತಿನಿಧಿ ಆನಂದ್ ತೀರ್ಥ ಮಾತನಾಡಿ, ಮತದಾರರ ಜಾಗೃತಿ ಕುರಿತು ತಮ್ಮ ಸಂಸ್ಥೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳನ್ನು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News