ಎಎಪಿಯಿಂದ ‘ಬೊಂಬಾಟ್ ಬೆಂಗಳೂರು ಶ್ಯಾಡೋ ಕೌನ್ಸಿಲ್’ ಕಾರ್ಯಕ್ರಮ

Update: 2019-01-12 16:26 GMT

ಬೆಂಗಳೂರು, ಜ.12: ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಆಮ್ ಆದ್ಮಿ ಪಾರ್ಟಿ ಬೆಂಗಳೂರು ಘಟಕದ ವತಿಯಿಂದ ‘ಬೊಂಬಾಟ್ ಬೆಂಗಳೂರು ಶ್ಯಾಡೋ ಕೌನ್ಸಿಲ್’ ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಬೆಂಗಳೂರು ಪ್ರಚಾರ ಸಮಿತಿ ಸದಸ್ಯೆ ಶಾಂತಲಾ ದಾಮ್ಲೆ, ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ 35 ವರ್ಷದೊಳಗಿನ ಯುವಜನತೆಯ ನೇತೃತ್ವದಲ್ಲಿ, ಪ್ರತಿ ಬಿಬಿಎಂಪಿ ವಾರ್ಡ್‌ಗೆ ಒಬ್ಬರಂತೆ ಯೂತ್ ಕೌನ್ಸಿಲರ್‌ಗಳನ್ನು ನೇಮಕ ಮಾಡಲಾಗುತ್ತದೆ ಹಾಗೂ ಮತದಾರರಲ್ಲಿ ಜಾಗೃತಿ ಮೂಡಿಸಿ, ಬಿಬಿಎಂಪಿಯನ್ನು ಸರಿದಾರಿಗೆ ತರುವಲ್ಲಿ ಯೂತ್ ಕೌನ್ಸಿಲರ್‌ಗಳು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ನಾಗರಿಕರು ಅಸಮರ್ಥ ಆಡಳಿತ ಮತ್ತು ಭ್ರಷ್ಟಾಚಾರದ ಬೇಗೆಯನ್ನು ಅನುಭವಿಸುತ್ತಿದ್ದಾರೆ. ಕಸ, ಸಂಚಾರ ದಟ್ಟಣೆ, ಪರಿಸರ ಮಾಲಿನ್ಯ, ನಶಿಸುತ್ತಿರುವ ಕೆರೆಗಳು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎಲ್ಲ ಪಕ್ಷಗಳು ನಿರ್ಲಕ್ಷಿಸುತ್ತಲೇ ಬಂದಿವೆ. ಅನೇಕ ಯುವಕರು ಪ್ರಾಣ ತೆತ್ತ ಸಂದರ್ಭಗಳೂ ಇವೆ ಎಂದು ಆರೋಪ ಮಾಡಿದರು.

ಇಂದಿನ ಯುವಜನತೆ ವಿವೇಕಾನಂದರನ್ನು ಸ್ಮರಿಸುವುದು ಮಾತ್ರವಲ್ಲ, ನಾಳಿನ ವಿವೇಕಾನಂದರೂ ಆಗುವ ಪಣ ತೊಡಬೇಕು ಮತ್ತು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ಆಧುನಿಕ ದಿನದ ಸಮಸ್ಯೆಗಳನ್ನು ಹಳೆಯ ಚಿಂತನೆಗಳ ಮೂಲಕ ಪರಿಹರಿಸಲಾಗುವುದಿಲ್ಲ. ದೇಶದಲ್ಲಿರುವ ಯುವಶಕ್ತಿ ಇಂದು ಬದಲಾವಣೆಯ ಹರಿಕಾರರಾಗಬೇಕು ಎಂದು ಹೇಳಿದರು. ಬಿಬಿಎಂಪಿ ವ್ಯಾಪ್ತಿಯ ಯುವಕ- ಯುವತಿಯರು ಯೂತ್ ಕೌನ್ಸಿಲ್‌ಗೆ ಸೇರಲು ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 88844 31214 ಅನ್ನು ಸಂಪರ್ಕಿಸಲು ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News