ಪೆಟ್ರಾ ಕ್ವಿಟೊವಾಗೆ ಒಲಿದ ಸಿಡ್ನಿ ಟೆನಿಸ್ ಪ್ರಶಸ್ತಿ

Update: 2019-01-12 18:38 GMT

ಸಿಡ್ನಿ, ಜ.12: ಆಸ್ಟ್ರೇಲಿಯದ ಆಟಗಾರ್ತಿ ಆ್ಯಶ್ಲೆ ಬಾರ್ಟಿ ಅವರನ್ನು ಹೋರಾಟದ ಪಂದ್ಯದಲ್ಲಿ 1-6, 7-5, 7-6(3) ಸೆಟ್‌ಗಳ ಅಂತರದಿಂದ ಮಣಿಸಿದ ಝೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ಸಿಡ್ನಿ ಅಂತರ್‌ರಾಷ್ಟ್ರೀಯ ಟೆನಿಸ್ ಪ್ರಶಸ್ತಿಯನ್ನು ಶನಿವಾರ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ವರ್ಷದ ಮೊದಲ ಗ್ರಾನ್‌ಸ್ಲಾಮ್ ಆಸ್ಟ್ರೇಲಿಯನ್ ಓಪನ್‌ಗೆ ಭರ್ಜರಿ ತಯಾರಿ ನಡೆಸಿದರು.

2015ರ ಚಾಂಪಿಯನ್, ವಿಶ್ವ ರ್ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿರುವ ಕ್ವಿಟೊವಾ ಮೊದಲ ಸೆಟ್‌ನಲ್ಲಿ ಮಾಡಿದ ತಪ್ಪುಗಳನ್ನು ಸುಧಾರಿಸಿಕೊಂಡು ಮುನ್ನುಗಿದ್ದು ಫಲ ನೀಡಿತು. ಪ್ರಥಮ ಸೆಟ್‌ನ್ನು 1-6ರಿಂದ ಸೋತ ಕ್ವಿಟೊವಾ ಎರಡು ಹಾಗೂ ಮೂರನೇ ಸೆಟ್‌ನಲ್ಲಿ ಪ್ರಬಲ ಹೋರಾಟ ನೀಡಿ ಗೆದ್ದರು.

ಕ್ವಿಟೊವಾ 45 ಅನಗತ್ಯ ತಪ್ಪುಗಳನ್ನು ಎಸಗಿದರೆ, ಬಾರ್ಟಿ ಕೇವಲ 33 ಅನಗತ್ಯ ತಪ್ಪುಗಳನ್ನು ಮಾಡಿದರು.

ವಿಶ್ವ ನಂ.15ನೇ ರ್ಯಾಂಕಿನ, ಕಳೆದ ಬಾರಿಯೂ ಈ ಟೂರ್ನಿಯಲ್ಲಿ ರನ್ನರ್‌ಅಪ್ ಆಗಿದ್ದ ಬಾರ್ಟಿ ಹೋರಾಟಕ್ಕೆ ಹೆಸರುವಾಸಿಯಾಗಿದ್ದಾರೆ. ತವರಿನ ಅಭಿಮಾನಿಗಳ ಎದುರು ಸುಲಭವಾಗಿ ಪಂದ್ಯವನ್ನು ಬಿಟ್ಟುಕೊಡದೆ ಜಿಗುಟುತನ ತೋರಿದ ಬಾರ್ಟಿ, ಅಂತಿಮ ವಾಗಿ ಕ್ವಿಟೊವಾ ಅವರ ಅಮೋಘ ಹೋರಾಟಕ್ಕೆ ಮಣಿಯಲೇಬೇಕಾಯಿತು.

ಸಿಡ್ನಿ ಅಂತರ್‌ರಾಷ್ಟ್ರೀಯ ಟೂರ್ನಿಯ ಹೆಸರಿನಲ್ಲಿರುವ ಈ ಪಂದ್ಯಾವಳಿಯು ಮುಂದಿನ ಋತುವಿನಲ್ಲಿ ಎಟಿಪಿ ಕಪ್ ಹೆಸರಿನಿಂದ ಆಯೋಜಿತವಾಗುತ್ತಿದೆ. ಬಹುತೇಕ ಇದು ಕೊನೆಯ ಟೂರ್ನಿ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News