ಶೂಟಿಂಗ್: ಮೀನುಗಾರನ ಮಗಳಿಗೆ ಚಿನ್ನ

Update: 2019-01-12 18:42 GMT

ಕ್ರೀಡಾ ಸಚಿವ ಪುತ್ರನಿಗೆ ಬಂಗಾರ

ಪುಣೆ, ಜ.12: ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಪುತ್ರ ಮಾನವಾದಿತ್ಯ ಸಿಂಗ್ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ಪುರುಷರ ಅಂಡರ್-21 ವಿಭಾಗದ ಟ್ರಾಪ್ ಶೂಟಿಂಗ್‌ನಲ್ಲಿ ಬಂಗಾರದ ಪದಕ ಗೆದ್ದುಕೊಂಡಿದ್ದಾರೆ. ಇದೇ ವಿಭಾಗದ ಮಹಿಳಾ ಸ್ಪರ್ಧೆಯಲ್ಲಿ ಮಧ್ಯಪ್ರದೇಶದ ಮನೀಷಾ ಕೀರ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಶನಿವಾರ ಇಲ್ಲಿಯ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ರಾಜಸ್ಥಾನದ ಮಾನವಾದಿತ್ಯ ಸಿಂಗ್ 39 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. ಹರ್ಯಾಣದ ಭೊವನೀಶ್ ಮೆಂಡಿರತ್ತಾ(34 ಅಂಕ) ದ್ವಿತೀಯ ಹಾಗೂ ಉತ್ತರ ಪ್ರದೇಶದ ಶಾರ್ದೂಲ್ ವಿಹಾನ್ 26 ಅಂಕ ಗಳಿಸಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಇದೇ ವಿಭಾಗದಲ್ಲಿ 2018ರ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ವಿಜೇತ ಶೂಟರ್ ಲಕ್ಷ ಶೋರಾನ್ 4ನೇ ಸ್ಥಾನಕ್ಕೆ ತಲುಪಿ ನಿರಾಸೆ ಅನುಭವಿಸಿದರು.

ಅಂಡರ್-21 ಮಹಿಳಾ ವಿಭಾಗದಲ್ಲಿ ಮೀನುಗಾರನ ಮಗಳು ಮಧ್ಯಪ್ರದೇಶದ ಮನೀಷಾ ಕೀರ್ ಬಂಗಾರದ ಪದಕ ಗೆದ್ದುಕೊಂಡರು. ಅವರು 38 ಅಂಕಗಳನ್ನು ಗಳಿಸಿದರೆ, ಬೆಳ್ಳಿ ಪದಕ ಗೆದ್ದುಕೊಂಡ ಕೀರ್ತಿ ಗುಪ್ತಾ 35 ಅಂಕ ಹಾಗೂ ದಿಲ್ಲಿಯವರೇ ಆದ ಆದ್ಯಾ ತ್ರಿಪಾಠಿ 25 ಅಂಕ ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮೆಹುಲಿ ಘೋಷ್‌ಗೆ ಜೂ. ಏರ್ ರೆಫಲ್‌ನಲ್ಲಿ ಬಂಗಾರ

ಮಹಿಳೆಯರ ಜೂನಿಯರ್ (ಅಂಡರ್-21) 10 ಮೀ. ಏರ್ ರೈಫಲ್‌ನಲ್ಲಿ ಯೂತ್ ಒಲಿಂಪಿಕ್ಸ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತೆ ಮೆಹುಲಿ ಘೋಷ್ ಬಂಗಾರದ ಪದಕಕ್ಕೆ ಭಾಜನರಾದರು.

ಶನಿವಾರ ನಡೆದ ಸ್ಪರ್ಧೆಯಲ್ಲಿ ಪ.ಬಂಗಾಳದ ಮೆಹುಲಿ 252.1 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನಿಯಾದರು. ಗುಜರಾತ್‌ನ ಎಲಾವೆನಿಲ್ 248.8 ಅಂಕ ಗಳಿಸಿ 2ನೇ ಸ್ಥಾನ ಹಾಗೂ ರಾಜಸ್ಥಾನದ ಮಾನಿನಿ ಕೌಶಿಕ್ 227 ಅಂಕ ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಅಂಡರ್-21 ಪುರುಷರ ಜೂನಿಯರ್‌ನ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಹರ್ಯಾಣದ ಆದರ್ಶ್ ಸಿಂಗ್ 30 ಅಂಕ ಪಡೆದು ಪ್ರಥಮ, ಹರ್ಯಾಣದವರೇ ಆದ ಆಯುಷ್ ಸಂಗ್ವಾನ್ 25 ಅಂಕ ಗಳಿಸಿ ದ್ವಿತೀಯ ಹಾಗೂ 19 ಅಂಕ ಗಳಿಸಿದ ಮಹಾರಾಷ್ಟ್ರದ ಹರ್ಷವರ್ಧನ್ ಯಾದವ್ ತೃತೀಯ ಸ್ಥಾನಿಯಾದರು.

ಇನ್ನು ಮಹಿಳೆಯರ ಅಂಡರ್-17 10 ಮೀ. ಏರ್ ರೈಫಲ್ ವಿಭಾಗದಲ್ಲಿ ಗುಜರಾತ್‌ನ ಹೀನಾ ಗೊಹೆಯ್ 247.5 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. 246 ಅಂಕ ಗಳಿಸಿದ ಪಂಜಾಬ್‌ನ ಜಸ್ಮೀರ್ ಕೌರ್ ದ್ವಿತೀಯ ಹಾಗೂ ಮಧ್ಯಪ್ರದೇಶದ ಯಾನಾ ರಾಥೋಡ್ 224.1 ಅಂಕ ಗಳಿಸಿ ತೃತೀಯ ಸ್ಥಾನಕ್ಕೆ ತೃಪ್ತಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News