ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಸ್ಟೀವ್ ಸ್ಮಿತ್

Update: 2019-01-12 18:44 GMT

ಸಿಡ್ನಿ, ಜ.12: ಚೆಂಡು ವಿರೂಪ ಪ್ರಕರಣದ ಹಿನ್ನೆಲೆಯಲ್ಲಿ ಒಂದು ವರ್ಷ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಇನ್ನಷ್ಟು ದಿನ ಕಾಯುವ ಅನಿವಾರ್ಯತೆ ಎದುರಾಗಿದೆ.

ಮಾರ್ಚ್ 28ಕ್ಕೆ ಸ್ಮಿತ್ ನಿಷೇಧದ ಅವಧಿ ಕೊನೆಗೊಳ್ಳುತ್ತದೆ. ಆದರೆ ಮೊಣಕೈಯ ಮೂಳೆಮುರಿತಕ್ಕೆ ಒಳಗಾಗಿರುವ ಸ್ಮಿತ್‌ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಬಳಿಕ ಆರು ವಾರಗಳ ಕಾಲ ಬ್ಯಾಂಡೇಜ್ ಧರಿಸಬೇಕು. ಬ್ಯಾಂಡೇಜ್ ತೆಗೆದ ಬಳಿಕ ಸ್ಮಿತ್ ಆಟದ ಅಂಗಳಕ್ಕೆ ಮರಳುವ ಸಮಯದ ಬಗ್ಗೆ ನಿರ್ಧರಿಸಬಹುದು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ವಕ್ತಾರರು ತಿಳಿಸಿದ್ದಾರೆ. ಬಾಂಗ್ಲಾದೇಶ ಪ್ರೀಮಿಯಲ್ ಲೀಗ್ (ಬಿಪಿಎಲ್) ನಲ್ಲಿ ಕೊಮಿಲಾ ವಿಕ್ಟೋರಿಯನ್ಸ್ ತಂಡದ ನಾಯಕನಾಗಿರುವ ಸ್ಮಿತ್, ಮೊಣಕೈಗೆ ಏಟಾದ ಕಾರಣ ಟೂರ್ನಿಯ ಮಧ್ಯದಲ್ಲೇ ತವರಿಗೆ ಮರಳಿದ್ದಾರೆ. ಪಾಕಿಸ್ತಾನದೆದುರು ಎಪ್ರಿಲ್‌ನಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ಸ್ಮಿತ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗುವ ನಿರೀಕ್ಷೆಯಿತ್ತು. ಇದೀಗ ಈ ಸರಣಿಯಲ್ಲಿ ಸ್ಮಿತ್ ಆಡುವ ಬಗ್ಗೆ ಅನುಮಾನವಿದೆ. ಯಾವುದೇ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಆಡದೆ ನೇರವಾಗಿ ಜೂನ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಈ ಮಧ್ಯೆ ಐಪಿಎಲ್‌ನ ಅರ್ಧಾಂಶದಷ್ಟು ಪಂದ್ಯಗಳಲ್ಲಿ ಸ್ಮಿತ್ ಆಡಲಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News