ಅರವಿಂದ ಕೇಜ್ರಿವಾಲ್ ಮಗಳ ಅಪಹರಣ ಬೆದರಿಕೆ: ಕೇಸ್ ದಾಖಲು

Update: 2019-01-13 06:48 GMT

 ಹೊಸದಿಲ್ಲಿ, ಜ.13: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಗಳನ್ನು ಅಪಹರಣ ಮಾಡುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸ್ ಸೈಬರ್ ಸೆಲ್ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಬುಧವಾರ ಸಂಜೆ ಸಿಎಂ ಕಚೇರಿಗೆ ಅನಾಮಧೇಯ ಮೇಲ್ ಬಂದಿತ್ತು. ‘‘ನಿಮ್ಮ ಪುತ್ರಿಯನ್ನು ಅಪಹರಿಸುತ್ತೇವೆ. ಆಕೆಯನ್ನು ರಕ್ಷಿಸಲು ನೀವು ಏನು ಮಾಡಬಹುದು ಎಂದು ಇ-ಮೇಲ್‌ನಲ್ಲಿ ಬರೆದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇ-ಮೇಲ್ ಸ್ವೀಕರಿಸಿದ ಕೆಲವೇ ಗಂಟೆಗಳ ಬಳಿಕ ಡಿಸಿಪಿಗೆ(ಉತ್ತರ)ವಿಷಯ ತಿಳಿಸಲಾಗಿದ್ದು, ದಿಲ್ಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಕಟ್ಟೆಚ್ಚರ ವಹಿಸಿದ್ದಾರೆ. ‘‘ಪಟ್ನಾಯಕ್ ತಕ್ಷಣವೇ ವಿಚಾರವನ್ನು ಸೈಬರ್ ಸೆಲ್‌ಗೆ ಕಳುಹಿಸಿದ್ದು, ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ತಿಳಿಸಲಾಗಿದೆ. ಇದೇ ವೇಳೆ ದಿಲ್ಲಿ ಪೊಲೀಸರು ಸಿಎಂ ಪುತ್ರಿಗೆ ಸುರಕ್ಷಾ ಸೇವಾಧಿಕಾರಿ(ಪಿಎಸ್‌ಒ)ಯನ್ನು ದಿಲ್ಲಿ ಪೊಲೀಸರು ನಿಯೋಜಿಸಲಾಗಿದೆ’’ ಎಂದು ಮೂಲಗಳು ತಿಳಿಸಿವೆ.

 ದಿಲ್ಲಿ ಸಿಎಂನ್ನು ಗುರಿಯಾಗಿಸಿದ್ದು ಇದೇ ಮೊದಲಲ್ಲ. ಕಳೆದ ವರ್ಷ ದುಷ್ಕರ್ಮಿಯೊಬ್ಬ ದಿಲ್ಲಿ ಸೆಕ್ರಟರಿಯಟ್ ಒಳಗೆ ಕೇಜ್ರಿವಾಲ್ ಮೇಲೆ ಖಾರದ ಪುಡಿ ಎರಚಿದ ಘಟನೆ ನಡೆದಿತ್ತು. ದಾಳಿಕೋರ ಅನಿಲ್ ಶರ್ಮಾ ಎಂಬಾತ ಸಿಎಂ ಕಚೇರಿ ಹೊರಗೆ ಕಾದುಕುಳಿತು ದಾಳಿ ನಡೆಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News