ಪಾಕ್‌ ನಲ್ಲಿ ಸೌದಿಯಿಂದ 10 ಬಿಲಿಯ ಡಾಲರ್ ವೆಚ್ಚದ ತೈಲ ಸಂಸ್ಕರಣಗಾರ ಸ್ಥಾಪನೆ

Update: 2019-01-13 16:52 GMT

ರಿಯಾದ್,ಜ.13: ಸೌದಿ ಅರೇಬಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್, ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪಾಕಿಸ್ತಾನದಲ್ಲಿ 10 ಬಿಲಿಯ (ಶತಕೋಟಿ) ಡಾಲರ್ ವೆಚ್ಚದಲ್ಲಿ ತೈಲ ಸಂಸ್ಕರಣಾಗಾರವೊಂದನ್ನು ನಿರ್ಮಿಸುವ ಒಪ್ಪಂದವೊಂದಕ್ಕೆ ಸಹಿಹಾಕಲಿದ್ದಾರೆ.

ಪಾಕಿಸ್ತಾನದ ಆಳಸಮುದ್ರದ ಬಂದರು ಪ್ರದೇಶ ಗದ್ದಾರ್‌ನಲ್ಲಿ ಸೌದಿ ಅರೇಬಿಯವು ಈ ತೈಲ ಸಂಸ್ಕರಣಾಗಾರವನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದೆಯೆಂದು, ಸೌದಿಯ ಇಂಧನ ಸಚಿವರು ತಿಳಿಸಿದ್ದಾರೆ. ಅವರು ಶನಿವಾರ ಚೀನಾದ ನೆರವಿನೊಂದಿಗೆ ನಿರ್ಮಾಣಗೊಳ್ಳುತ್ತಿರುವ ಪಾಕಿಸ್ತಾನದ ಗ್ವಾದರ್ ಬಂದರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯವನ್ನು ತಿಳಿಸಿದರು.

ಗಗನಕ್ಕೇರುತ್ತಿರುವ ತೈಲ ಬೆಲೆಯೇರಿಕೆಯಿಂದಾಗಿ ಪಾಕಿಸ್ತಾನದ ಗಂಭೀರವಾದ ಚಾಲ್ತಿಖಾತೆ ಕೊರತೆಯನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅದು ವಿದೇಶಗಳಿಂದ ಬಂಡವಾಳ ಹೂಡಿಕೆ ಹಾಗೂ ಇತರ ಆರ್ಥಿಕ ಬೆಂಬಲದ ಕೊಡುಗೆಯನ್ನು ಬಯಸುತ್ತಿದೆ. ಕಳೆದ ವರ್ಷ ಸೌದಿ ಅರೇಬಿಯವು ಪಾಕಿಸ್ತಾನಕ್ಕೆ ಕಚ್ಚಾ ತೈಲದ ಆಮದಿಗಾಗಿ 6 ಶತಕೋಟಿ ಡಾಲರ್ ಅರ್ಥಿಕ ನೆರವು ಸೇರಿದಂತೆ 6 ಶತಕೋಟಿ ಡಾಲರ್‌ಗಳ ಪ್ಯಾಕೇಜನ್ನು ಘೋಷಿಸಿತ್ತು.

‘‘ತೈಲ ಸಂಸ್ಕರಣಾಗಾರದ ಸ್ಥಾಪನೆ ಹಾಗೂ ಚೀನಾ-ಪಾಕ್ ಅರ್ಥಿಕ ಕಾರಿಡಾರ್ ಯೋಜನೆಯಲ್ಲಿ ಪಾಕಿಸ್ತಾನದ ಜೊತೆ ಪಾಲುದಾರನಾಗುವ ಮೂಲಕ ಸೌದಿ ಆರೇಬಿಯವು ಪಾಕಿಸ್ತಾನದ ಆರ್ಥಿಕ ಪ್ರಗತಿಯು ಸ್ಥಿರವಾಗುವುದನ್ನು ಬಯಸುತ್ತದೆ’’ ಎಂದು ಸೌದಿಯ ಇಂಧ ಸಚಿವ ಖಾಲಿದ್ ಅಲ್-ಫಾಲಿಹ್ ಅವರು ಗ್ವಾದರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದು,ತೈಲ ಸಂಸ್ಕರಣಾಗಾರದ ಸ್ಥಾಪನೆ ಕುರಿತ ಒಪ್ಪಂದಕ್ಕೆ ಸಹಿಹಾಕಲಿದ್ದಾರೆ. ಪಾಕ್‌ನಲ್ಲಿ ಇತರ ಕ್ಷೇತ್ರಗಳಲ್ಲಿಯೂ ಸೌದಿ ಆರೇಬಿಯ ಹೂಡಿಕೆ ಮಾಡಲಿದೆಯೆಂದು ಅವರು ಹೇಳಿದ್ದಾರೆ.

ಗ್ವಾದರ್‌ನಲ್ಲಿ ತೈಲ ಸಂಸ್ಕರಣಾಗಾರ ಸ್ಥಾಪನೆಯ ಮೂಲಕ ಸೌದಿ ಆರೇಬಿಯವು ಸಿಪಿಇಸಿಯ ಪ್ರಮುಖ ಪಾಲುದಾರನೆನೆಸಿಕೊಳ್ಳಲಿದೆಯೆಂದು ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಗುಲಾಮ್ ಶರ್ವಾರ್ ಖಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News